ರಬ್ಬರ್ ಬೆಳೆ ನಮ್ಮ ಅಡಿಕೆ ತೆಂಗಿನಂತಲ್ಲ. ಈ ಬೆಳೆಗೆ ಇರುವ ಅವಕಾಶ ಅಪಾರ. ಆದರೆ ರಬ್ಬರ್ ಬೆಳೆಯನ್ನು ಕೇಳುವವರೇ ಇಲ್ಲ. ರಬ್ಬರ್ ಬೆಳೆಗಾರರಿಗೆ ಬೆಂಬಲವಾಗಿ ಇರಲಿ ಎಂದು ಸ್ಥಾಪಿಸಲಾದ ರಬ್ಬರ್ ಬೋರ್ಡ್ ಸಹ ಬೆಳೆಗಾರರ ನೆರವಿಗೆ ಬರುವುದು ಕಾಣಿಸುತ್ತಿಲ್ಲ.ರಬ್ಬರ್ ಬೆಲೆ ಕುಸಿಯಲಾರಂಭಿಸಿ ಸುಮಾರು 9-10 ವರ್ಷಗಳಾಗಿದೆ. ಒಮ್ಮೆ ಪಾತಾಳಕ್ಕೆ, ಮತ್ತೆ ಸ್ವಲ್ಪ ಆಸೆ ಹುಟ್ಟಿಸಿ ಪುನಹ ಪಾತಾಳಕ್ಕೇ ಇಳಿಯುತ್ತಿದೆ. ಬಹುಷಃ ಶೇರು ಮಾರುಕಟ್ಟೆಯಲ್ಲಿ ಶೇರು ಮಾರಿದ ನಂತರ ಬೆಲೆ ಏರಲಾರಂಭಿಸಿದಂತೆ ರಬ್ಬರ್ ಮರಗಳನ್ನು ಎಲ್ಲರೂ ಕಡಿದು ಮುಗಿದ ಮೇಲೆ ಮತ್ತೆ ಬೆಲೆ ಏರಿಕೆ ಆಗುವುದೋ ಎಂಬ ಸಂಶಯವಿದೆ.
ನೈಸರ್ಗಿಕ ರಬ್ಬರ್ ಮರದ ಹಾಲಿನಿಂದ ತಯಾರಾಗುತ್ತದೆ. ಸುಮಾರು 40,000 ಉತ್ಪನ್ನಗಳು ನೈಸರ್ಗಿಕ ರಬ್ಬರ್ ಮೂಲಕ ತಯಾರಾಗುತ್ತದೆ. ಪ್ರತೀಯೊಬ್ಬ ವ್ಯಕ್ತಿಯೂ ರಬ್ಬರ್ ನ ಒಂದಿಲ್ಲೊಂದು ಉತ್ಪನ್ನವನ್ನು ಬಳಕೆ ಮಾಡುತ್ತಾನೆ. ಇದು ನಮ್ಮ ದೇಶ ಮಾತ್ರವಲ್ಲ. ಇಡೀ ಪ್ರಪಂಚದೆಲ್ಲೆಡೆ. ಆದಾಗ್ಯೂ ನೈಸರ್ಗಿಕ ರಬ್ಬರ್ ಈಗ ಕೃಷಿ ಉತ್ಪನ್ನಗಳಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿದೆ. ರಬ್ಬರ್ ಸಸಿ ನೆಟ್ಟು 7 ವರ್ಷ ಆದ ತರುವಾಯ ಆ ಮರದ ಕಾಂಡ ನಿರ್ದಿಷ್ಟ ದಪ್ಪಕ್ಕೆ ಬೆಳೆದ ನಂತರ ಅದರ ಕಾಂಡಕ್ಕೆ ವೈಜ್ಞಾನಿಕವಾಗಿ ಗಾಯ ಮಾಡಿ ಅದರಲ್ಲಿ ಸ್ರವಿಸುವ ಬಿಳಿಯಾದ ಹಾಲನ್ನು ಸಂಸ್ಕ್ರರಿಸಿ ನೈಸರ್ಗಿಕ ರಬ್ಬರ್ ತಯಾರಿಸಲಾಗುತ್ತದೆ. ಭಾರತ ಸರಕಾರ ರಬ್ಬರ್ ಬೆಳೆಗಾರರಿಗೆ ಅನುಕೂಲವಾಗುವಂತೆ ರಬ್ಬರ್ ಬೋರ್ಡ್ ಸಹ ಸ್ಥಾಪಿಸಿದೆ. ಯಾವುದು ಮಾಡಿದ್ದರೂ ಬೆಲೆ ಮಾತ್ರ ಏರಿಕೆ ಆಗುತ್ತಿಲ್ಲ.
ರಬ್ಬರ್ ಉತ್ಪಾದನೆ ಸುಲಭದ ಕೆಲಸ ಅಲ್ಲ:
- ನೈಸರ್ಗಿಕ ರಬ್ಬರ್ ಉತ್ಪಾದನೆಗೆ ಇರುವ ಕಷ್ಟ ಅಷ್ಟಿಷ್ಟಲ್ಲ. ಭೂಮಿ ಸಿದ್ದತೆ ಮಾಡಬೇಕು, ಗಿಡ ನೆಡಬೇಕು, ಗೊಬ್ಬರ ಹಾಕಿ ಪೋಷಿಸಬೇಕು.
- 7 ವರ್ಷ ಕಾದು ಫಸಲನ್ನು ಪಡೆಯಬೇಕು. ಒಂದು ಮರ ವರ್ಷಕ್ಕೆ ಸುಮಾರು 4-5 ಕಿಲೋ ದಷ್ಟು ರಬ್ಬರ್ ಉತ್ಪಾದಿಸುತ್ತದೆ.
- ಒಂದು ಹೆಕ್ಟೇರಿಗೆ ಸುಮಾರು 375 ಸಸಿಗಳಿಂದ ಹೆಚ್ಚೆಂದರೆ 1000 ಕಿಲೋ ರಬ್ಬರ್ ಉತ್ಪಾದನೆ ಸಾಧ್ಯ.
- ಈ ವರ್ಷದ ಸರಾಸರಿ ರಬ್ಬರ್ ಬೆಲೆ ಸುಮಾರು 150ರೂ. ಗಳಷ್ಟು ಮಾತ್ರ.
- ಈ ಬೆಲೆಯಲ್ಲಿ ರಬ್ಬರ್ ಬೆಳೆ ಹೇಗೆ ಬೆಳೆಗಾರನನ್ನು ಬದುಕಿಸಲು ಸಾಧ್ಯ?
- ನೈಸರ್ಗಿಕ ರಬ್ಬರ್ ಉತ್ಪಾದನೆ ಎಂಬುದು ಉಳಿದೆಲ್ಲಾ ಕೃಷಿ ಉತ್ಪಾದನೆಗಿಂತ ಕಷ್ಟದ ಕೆಲಸ.
- ರಬ್ಬರ್ ಮರಗಳನ್ನು ಸಾಧ್ಯವಾದಷ್ಟು ಬೇಗ, ಸೂರ್ಯ ಉದಯಕ್ಕೆ ಮುಂಚೆ, ಟ್ಯಾಪಿಂಗ್ ಮಾಡಬೇಕು.( Early Taping late collection)
- ಸಾಮಾನ್ಯವಾಗಿ ಬೆಳೆಗಾರರು 3-4 ಗಂಟೆ ಮುಂಜಾವಿನಲ್ಲಿ ಎದ್ದು, ಎತ್ತರ ತಗ್ಗಾದ ಗುಡ್ಡ ಬೆಟ್ಟಗಳ ರಬ್ಬರ್ ತೋಟದಲ್ಲಿ ಹೆಡ್ ಲೈಟ್ ಹಾಕಿ ಓಡಾಡಿ ಟ್ಯಾಪಿಂಗ್ ಮಾಡುತ್ತಾರೆ.
- ಟ್ಯಾಪಿಂಗ್ ಮಾಡುವುದೆಂದರೆ ಅಷ್ಟು ಸುಲಭದ ಕೆಲಸ ಅಲ್ಲ.
- ಮರದ ಮಾರ್ಕಿಂಗ್ ಪ್ರಕಾರ ಇಂತಿಷ್ಟೇ ದಪ್ಪಕ್ಕೆ ತೊಗಟೆಯನ್ನು ಕೆರೆದು ತೆಗೆಯಬೇಕು.
- ಅದರಿಂದ ಒಸರುವ ಹಾಲನ್ನು ಸಂಗ್ರಹಿಸಲು ಪಾತ್ರೆ (ಕಪ್) ನೇತಾಡಿಸಬೇಕು.
- ಮಳೆ ಬರುವ ಕಾಲದಲ್ಲಿ ಟ್ಯಾಪಿಂಗ್ ಪ್ಯಾನೆಲ್ ಗೆ ನೀರು ಬೀಳದಂತೆ ಮಳೆ ರಕ್ಷಣೆ ಮಾಡಬೇಕು( rain guard) ಮಳೆ ಗಾಳಿ, ಚಳಿ ಎಂತಹ ಸನ್ನಿವೇಶವಿದ್ದರೂ ಟ್ಯಾಪಿಂಗ್ ಗೆ ಹೋಗಬೇಕು.
- ಕತ್ತಲೆಯ ವಾತವಾರಣದಲ್ಲಿ ಕಾಡು ಪ್ರಾಣಿಗಳಿದ್ದರೂ ಭಯಪಡದೆ ಟ್ಯಾಪಿಂಗ್ ಮಾಡಬೇಕು.
- ಟ್ಯಾಪಿಂಗ್ ಮಾಡಿದ ಹಾಲು ಸಂಗ್ರಾಹಕ ಪಾತ್ರೆಯಲ್ಲಿ ಶೇಖರಣೆ ಆದ ಮೇಲೆ ಅದನ್ನು ಒಟ್ಟುಗೂಡಿಸಿ, ಇಳಿಜಾರು ಎತ್ತರ ತಗ್ಗು ಪ್ರದೇಶದಿಂದ ಹೊತ್ತುಕೊಂಡು ತರಬೇಕು.
- ಸಂಗ್ರಹಿಸಲು ತಡವಾದಷ್ಟೂ ಒಳ್ಳೆಯದು. ಪ್ರತೀಯೊಂದು ಮರಕ್ಕೂ ಎರಡೆರಡು ಬಾರಿ ಹೋಗಬೇಕು.
- ಹೀಗೆ ಸಂಗ್ರಹಿಸಲ್ಪಟ್ಟ ಹಾಲನ್ನು ಒಂದೆಡೆ ತಂದು ಅದನ್ನು ಹೆಪ್ಪುಗಟ್ಟಿಸಬೇಕು.
- ನಿರ್ದಿಷ್ಟ ಆಕಾರದ ಪಾತ್ರೆಯಲ್ಲಿ ಹಾಕಿ ಹೆಪ್ಪುಗಟ್ಟಿದ ರಬ್ಬರ್ ಅನ್ನು ಯಂತ್ರಕ್ಕೆ ಹಾಕಿ ಅದರ ನೀರಿನ ಅಂಶವನ್ನು ತೆಗೆದು ರಬ್ಬರ್ ಶೀಟನ್ನು ತಯಾರಿಸಬೇಕು.
- ಅದನ್ನು ಹೊಗೆ ಮನೆಯಲ್ಲಿ ಒಣಗಿಸಿದ ನಂತರ ಸಿಗುವ ರಬ್ಬರ್ ಶೀಟು ಏನಿದೆಯೋ ಅದೇ ನೈಸರ್ಗಿಕ ರಬ್ಬರ್ ನ ಮೂಲವಸ್ತು.
- ಇಷ್ಟೊಂದು ಕಷ್ಟದಲ್ಲಿ ಉತ್ಪಾದನೆಯಾಗುವ ಒಂದು ಶೀಟಿನ ತೂಕ ಸರಾಸರಿ 400 ಗ್ರಾಂ ಗಳು.
- ರಬ್ಬರ್ ಮರದಲ್ಲಿ ಉತ್ತಮ ಹಾಲಿನ ಇಳುವರಿ ಬರಲು ಪ್ರಾರಂಭವಾಗುವುದು 14 ವರ್ಷದ ನಂತರ.
- ಇಷ್ಟೊಂದು ಬಂಡವಾಳ ಹೂಡಿ, ಇಷ್ಟೊಂದು ಕಾದು ಒಂದು ಕಿಲೋ ರಬ್ಬರ್ ಗೆ ಸಿಗುವ ಬೆಲೆ ಸರಾಸರಿ 150 ಕ್ಕಿಂತಲೂ ಕಡಿಮೆ.
10 ವರ್ಷದಿಂದಲು ಬೆಲೆ ಅಸ್ಥಿರತೆ:
- ನೈಸರ್ಗಿಕ ರಬ್ಬರ್ ನ ಬೆಲೆ ಸತತ 9 ವರ್ಷಗಳಿಂದ ಇಳಿಕೆಯ ಹಾದಿಯಲ್ಲಿದೆ. 2013 ರಲ್ಲಿ 168 ರೂ. RSS-4, ಇದ್ದುದು 2014 ಕ್ಕೆ 136 ರೂ. ಗಳಿಗೆ ಇಳಿಕೆಯಾಯಿತು.
- 2015 ರಲ್ಲಿ ಕಿಲೋರೂ. 121, 2016 ರಲ್ಲಿ ರೂ. 122, 2017 ರಲ್ಲಿ ರೂ. 123, ಇತ್ತು.
- 2018ರಲ್ಲಿ ರೂ. 125 ರೂ. 2019 ರಲ್ಲಿ ರೂ. 131.50 ಇತ್ತು.
- 2020 ರಲ್ಲಿ ರೂ. 116, 2021 ರಲ್ಲಿ ರೂ. 152, 2022 ರಲ್ಲಿ ಜೂನ್ ತನಕ ಸರಾಸರಿ ರೂ.169 ಇತ್ತು.
- ಈ ವರ್ಷದ ಪ್ರಾರಂಭ ಜನವರಿ ಮೊದಲವಾರ RSS 4 ಗೆ 159 ರೂ. ಇತ್ತು,
- ಫೆಬ್ರವರಿಗೆ 162 ಆಸು ಪಾಸು, ಈ ಮಧ್ಯೆ 156 ಕ್ಕೆ ಇಳಿದದ್ದೂ ಇದೆ.
- ಮಾರ್ಚ್ ನಲ್ಲಿ 165. 167,170, 168,169 171 ತನಕವೂ ಏಇಕೆ ಇಳಿಕೆ ಆಗಿದೆ.
- ಎಪ್ರೀಲ್ ತಿಂಗಳಿನಲ್ಲಿ 172, 173, 171,168,169,166,164, ಹೀಗೆಲ್ಲಾ ಏರಿಳಿತಗಳಾಗಿದೆ.
- ಮೇ ತಿಂಗಳಲ್ಲಿ ರೂ.166, 168,169,167,170,172,173, ಹೀಗೆಲ್ಲಾ ಆಗಿತ್ತು.
- ಜೂನ್ ತಿಂಗಳಲ್ಲಿ 171, 172,173,174,175,ರ ಸುಮಾರಿನಲ್ಲಿ ಬೆಲೆ ಇತ್ತು.
- ಜುಲೈ ತಿಂಗಳಲ್ಲಿ ರೂ.175 ರಿಂದ ಪ್ರಾರಂಭವಾಗಿ 176,176.50,175 ,174,173.50173,172,171,170,169.50,168.50, 167,166 ರತ್ತ ಇಳಿಕೆಯಾಗುತ್ತಾ ಬಂತು.
- ಆಗಸ್ಟ್ ತಿಂಗಳಲ್ಲಿ 165 ರಿಂದ ಪ್ರಾರಂಭವಾಗಿ 166,167,165,164,162,160,157,156,155,154, ಕ್ಕೆ ಇಳಿಕೆಯಾಯಿತು.
- ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ಇಳಿಕೆಯ ಹಾದಿ ಹಿಡಿದು, 153,150,148,147 ಕ್ಕೆ ಮುಟ್ಟಿತು.
- ಇದು ಇನ್ನೂ ಇಳಿಕೆಯಾಗುವ ಸಂಭವವಿದೆ.
- ಮಲೇಶಿಯಾ ಮುಂತಾದ ದೇಶಗಳಿಂದ ಸ್ಕ್ರಾಪ್ ರಬ್ಬರ್ ಕಡಿಮೆ ಬೆಲೆಗೆ ತಂದು ಇಲ್ಲಿ ಔದ್ಯಮಿಕ ಬಳಕೆಗೆ ಉಪಯೋಗಿಸಲಾಗುತ್ತಿದೆ.
- ಜೊತೆಗೆ ಚೀನಾ 40% ಬಳಕೆ ಮಾಡುವ ದೇಶವಾಗಿದ್ದು, ಬಳಕೆ ಕಡಿಮೆ ಮಾಡಿ, ಉತ್ಪಾದಕ ದೇಶಗಳಿಗೆ ಹೊಡೆತ ನೀಡುವುದರಲ್ಲಿದೆ.
- ಈಗಿನ ದರವೇ ನಷ್ಟದ್ದು, ಇನ್ನೂ ದರ ಇಳಿಕೆಯಾದರೆ, ರಬ್ಬರ್ ಬೆಳೆ ಇದೆ, ಹಾಲು ತೆಗೆದರೂ ನಷ್ಟ, ತೆಗೆಯದಿದ್ದರೂ ನಷ್ಟ ಎಂಬ ಸ್ಥಿತಿ ಉಂಟಾಗಲಿದೆ.
ಬೆಳೆ ಕಡಿಮೆಯಾಗಿದೆ- ಬೆಲೆ ಇಲ್ಲ:
- ಕಳೆದ ಮೂರು ವರ್ಷಗಳಿಂದ ಅಡಿಕೆಯ ಬೆಲೆಯಲ್ಲಿ ಏರಿಕೆ ಆಗುತ್ತಿರುವುದರ ಕಾರಣ ರಬ್ಬರ್ ಬೆಳೆಸಿದ 50% ಬೆಳೆಗಾರರು ರಬ್ಬರ್ ತೋಟವನ್ನು ಕಡಿದು ಅದರಲ್ಲಿ ಅಡಿಕೆ ಬೆಳೆ ಹಾಕಿದ್ದಾರೆ.
- ಇನ್ನೇನು ಮುಂದಿನ ವರ್ಷಕ್ಕೆ ಈ ಪ್ರಮಾಣಕ್ಕೆ ಇನ್ನೂ 10-20% ಸೇರಲಿದೆ.
- ಬರೇ ಕರಾವಳಿಯ, ಮಲೆನಾಡು ಮಾತ್ರವಲ್ಲ, ಕೇರಳದಲ್ಲೂ ಆಗಿದೆ.
- ಅಸ್ಸಾಂ, ತ್ರಿಪುರ, ಮೇಘಾಲಯಗಳಲ್ಲೂ ರಬ್ಬರ್ ಮರಗಳನ್ನು ಕಡಿದು ಅಡಿಕೆ ಸಸಿ ಹಾಕಲಾರಂಭಿಸಿದ್ದಾರೆ ಎಂಬ ಮಾಹಿತಿ ಮಿತ್ರರೊಬ್ಬರಿಂದ ತಿಳಿಯಿತು.
- ಇಷ್ಟೊಂದು ರಬ್ಬರ್ ಬೆಳೆ ಪ್ರದೇಶ ಕಡಿಮೆಯಾದರೂ ಬೆಲೆ ಏರಿಕೆ ಅಗದಿರುವುದು ಅಚ್ಚರಿಯ ಸಂಗತಿ.
- ಇದಕ್ಕೆಲ್ಲಾ ಕಾರಣ ಜಾಗತಿಕ , ದೇಶಿಯ ರಬ್ಬರ್ ಬಳಕೆ ಎಷ್ಟು ಇದೆ, ಎಂಬ ಲೆಕ್ಕಾಚಾರ ಇಲ್ಲದೆ ಬೆಳೆ ಬೆಳೆಸಲು ಉತ್ತೇಜನ ನೀಡಿರುವುದೇ ಆಗಿದೆ.
ನಮ್ಮ ದೇಶದಲ್ಲಿ ಯಾವುದೇ ಬೆಳೆಗೆ ಸಂಬಂಧಿಸಿದಂತೆ ಸಂಶೊಧನಾ ಕೇಂದ್ರಗಳಿರಲಿ, ಬೋರ್ಡ್ ಗಳಿರಲಿ, ಬೆಳೆ ವಿಸ್ತರಣೆ, ಸರಕಾರದ ಅನುದಾನ ಹಂಚಿಕೆ, ಮಾರ್ಗದರ್ಶನದಂತಹ ಜವಾಬ್ಧಾರಿ ರಹಿತ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುತ್ತದೆಯೇ ಹೊರತು ಬೆಳೆಯ ಲೆಕ್ಕಾಚಾರ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಯಾವ ವ್ಯವಸ್ಥೆಯೂ ಗಮನಹರಿಸದಿರುವುದು ಬೆಳೆಗಾರರ ದುರದೃಷ್ಟ.
ರಬ್ಬರ್ ಬೆಳೆಗಾರರ ಕಷ್ಟ ಅರ್ಥ ಮಾಡಿಕೊಂಡರು:
- ಕಳೆದ ಕೆಲವು ವರ್ಷಗಳಿಂದ ಕ್ಯಾಂಪ್ಕೋ ಸಹಕಾರಿ ಸಂಸ್ಥೆ ರಬ್ಬರ್ ಬೆಳೆಗಾರರಿಗೆ ಮಾರುಕಟ್ಟೆ ಒದಗಿಸುತ್ತಾ ಬಂದಿದೆ.
- ನೈಸರ್ಗಿಕ ರಬ್ಬರ್ ನ ಬೆಲೆ ಕುಸಿತ, ಹಾಗೂ ಬೆಳೆಗಾರರ ಕಷ್ಟವನ್ನು ಅರ್ಥಮಾಡಿಕೊಂಡ ಸಂಸ್ಥೆಯು ಸರಕಾರಕ್ಕೆ ರಬ್ಬರ್ ಗೆ ಬೆಂಬಲ ಬೆಲೆ ಘೋಷಿಸುವಂತೆ ಮನವಿ ಮಾಡಿದೆ.
- ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಎ ಕಿಶೋರ್ ಕುಮಾರ್ ಕೋಡ್ಗಿಯವರು ಸ್ವತಹ ಕೃಷಿಕರೂ ಆಗಿದ್ದು, ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
- ಇವರ ಈ ಸ್ಪಂದನೆಗೆ ಗೌರವಿಸುವಂತದ್ದು.
- ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದಂತೆ,ನೈಸರ್ಗಿಕ ರಬ್ಬರಿನ ಆಮದಿನ ಮೇಲೆ 25 ಶೇಕಡ ಮತ್ತು ಕಂಪೌಂಡ್ ರಬ್ಬರಿನ ಮೇಲೆ 10 ಶೇಕಡ ಅಮದು ಸುಂಕ ವಿಧಿಸಲಾಗಿದೆ.
- ಆದರೆ ನೈಸರ್ಗಿಕ ರಬ್ಬರ್ ವಿದೇಶದಿಂದ ಕಂಪೌಂಡ್ ರಬ್ಬರಿನ ಹೆಸರಿನಲ್ಲಿ 25%ನ ಬದಲು 10%ಆಮದು ಸುಂಕ ಪಾವತಿಸಿ ಆಮದಾಗುತ್ತಿದೆ.
- ಇಲ್ಲಿನ ಉತ್ಪಾದನಾ ವೆಚ್ಚಕ್ಕಿಂತ ಮಾರುಕಟ್ಟೆ ದರ ಕಡಿಮೆಯಾಗಿ ರೈತರು ಕಂಗಾಲಾಗಿದ್ದಾರೆ.
- ನೈಸರ್ಗಿಕ ಮತ್ತು ಕಂಪೌಂಡ್ ರಬ್ಬರಿಗೆ ಏಕರೂಪ ಆಮದು ಸುಂಕ ವಿಧಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ಧಾರೆ.
ಈ ವರ್ಷ ಕೇರಳದಲ್ಲಿ ರಬ್ಬರ್ ಕೃಷಿಗೆ ಅನುಕೂಲಕರವಾದ ಹವಾಮಾನ ಇದ್ದು ಫಸಲು ಜಾಸ್ತಿಯಾಗಿ ದರ ಮತ್ತೂ ಕುಸಿಯುವ ಸಾಧ್ಯತೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸರಕಾರ ರಬ್ಬರ್ ಗೆ ಮಾರುಕಟ್ಟೆ ಬೆಂಬಲ ಬೆಲೆ(MSP) ಯೋಜನೆಯಡಿಯಲ್ಲಿ ರಬ್ಬರ್ ಖರೀದಿಸಬೇಕು.ರೈತರು ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸದಿದ್ದರೆ ದರ ಕುಸಿತದ ವಿಷವರ್ತುಲ ಎಲ್ಲಾ ಉತ್ಪನ್ನಗಳಿಗೆ ಹಬ್ಬುವ ಸಾಧ್ಯತೆ ಇದೆ.2016ರಲ್ಲಿ ರಬ್ಬರ್ ಬೋರ್ಡ್ ರಬ್ಬರಿನ ಉತ್ಪಾದನಾ ವೆಚ್ಚ ಕಿಲೊಗೆ 172ರೂಪಾಯಿ ಎಂದು ಅಂದಾಜಿಸಿದೆ.ಪ್ರಸ್ತುತ ಅದು ಕಿಲೊಗೆ 250 ರೂಪಾಯಿಗೆ ತಲುಪಿದೆ. ಕರ್ನಾಟಕ ಸರಕಾರವೂ ಕೇರಳ ಸರಕಾರ ಮಾದರಿಯಲ್ಲೇ ರಬ್ಬರಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂಬುದು ಇವರ ಮನವಿ.
ಒಂದು ಬೆಳೆಯ ಬೆಲೆ ನೆಲಕಚ್ಚಿದರೆ , ಕೇವಲ ಬೆಳೆಗಾರರಿಗಷ್ಟೇ ನಷ್ಟವಲ್ಲ. ಆ ಬೆಳೆಯನ್ನು ನಂಬಿಕೊಂಡ ಲಕ್ಷಾಂತರ ಕೆಲಸಗಾರರು, ಮಾರುಕಟ್ಟೆ ವ್ಯವಸ್ಥೆ ಹಾಗೂ ಲಾಭದಾಯಕವಲ್ಲವೆಂದು ಬೆಳೆ ಪರಿವರ್ತನೆ ಮಾಡುವಿಕೆ ಇವುಗಳಿಂದ ಉಂಟಾಗುವ ನಷ್ಟಗಳು ಅಪರಿಮಿತ. ರಬ್ಬರ್ ನಂತಹ ಬೆಳೆ ಸೋತರೆ ಅದರ ಹೊಡೆತ ಅಡಿಕೆಯ ಮೇಲೆ ಬೀಳುತ್ತದೆ. ನಂತರ ಅಡಿಕೆಗೆ ಹೊಡೆತ ಬೀಳುತ್ತದೆ. ಇದೆಲ್ಲಾ ಒಂದು ಚಕ್ರದಂತೆ. ಹಾಗಾಗಿ ರಬ್ಬರ್ ಬೆಳೆಗೆ ನ್ಯಾಯಯುತವಾದ ಬೆಲೆ ನಿರ್ಧರಣೆ ಮಾಡಿ, ಬೆಳೆಗಾರರು ರಬ್ಬರ್ ಮರಗಳನ್ನು ಕಡಿದು ಬೇರೆ ಬೆಳೆ ಹಾಕದಂತೆ ಮಾಡಬೇಕಾದ ತುರ್ತು ಅಗತ್ಯ ಇದೆ.