ಸಗಣಿ ಗೊಬ್ಬರ – ಪರಿಪೂರ್ಣ ಸಾವಯವ ಪೋಷಕವಲ್ಲ.

ಸಗಣಿ ಗೊಬ್ಬರ
ಕೆಲವು ರೈತರು ನಾನು ನನ್ನ ಬೆಳೆಗಳಿಗೆ ಹಸುವಿನ ಸಗಣಿ ಗೊಬ್ಬರವನ್ನು ಮಾತ್ರ ಕೊಡುವುದು ಎನ್ನುತ್ತಾರೆ. ಮರಗಳು ಹಚ್ಚ ಹಸುರಾಗಿ ಬೆಳೆಯುತ್ತವೆಯಾದರೂ ಪರಿಪೂರ್ಣ ಪೋಷಕಗಳು ಇಲ್ಲದ ಕಾರಣ ಫಸಲು ಅಷ್ಟಕ್ಕಷ್ಟೇ.ಯಾವುದೇ ಪ್ರಾಣಿಯ ತ್ಯಾಜ್ಯಗಳಿಂದ ಪಡೆಯುವ ಹಿಕ್ಕೆ ಅಥವಾ ಮಲದಲ್ಲಿ  ಎಷ್ಟು ಪೋಷಕಗಳಿರುತ್ತವೆ ಎಂಬುದು ಹಲವಾರು ಸಂಗತಿಗಳ ಮೇಲೆ ಅವಲಂಭಿಸಿದೆ.
 • ಪ್ರಾಣಿಯ ದೇಹ, ಅವುಗಳ ತಳಿ, ವಯಸ್ಸು, ತೂಕ, ಆಹಾರ ಸೇವಿಸುವುದರ ಮೇಲೆ ಅವು ಮಾಡಿಕೊಡುವ ಗೊಬ್ಬರದ ಪ್ರಮಾಣ ಹೊಂದಿರುತ್ತದೆ.
 • ಇಷ್ಟು ಮಾತ್ರವಲ್ಲ ಆ ಪ್ರಾಣಿಯ ಆರೋಗ್ಯ  ಮತ್ತು ಅದು ತಾನು ತಿಂದ ಆಹಾರವನ್ನು ಯಾವ ರೀತಿ ವ್ಯಯಿಸುತ್ತದೆ- ಇದರ ಮೇಲೆ ಅದರ ವಿಸರ್ಜಿತ ವಸ್ತುವಿನ ಪೋಷಕ ಲೆಕ್ಕಕ್ಕೆ ಬರುತ್ತದೆ.
 • ಹಿಂದೆ ನಮ್ಮ ಹಸುಗಳು ಹೊಲ, ಗೋಮಾಳ, ಕಾಡು ಮೇಡುಗಳಲ್ಲಿ ಮೆಂದು ವೈವಿದ್ಯಮಯವಾದ ಸೊಪ್ಪು ಸದೆಗಳನ್ನು ತಿನ್ನುತ್ತಿದ್ದವು.
 • ಅಗ ಆ ಮೇವಿನ ವಸ್ತುಗಳಲ್ಲಿ ಕೆಲವು ಪೊಷಕಗಳು ಇದ್ದು ಅದು ಸಗಣಿಯಲ್ಲಿ ಸ್ವಲ್ಪ ಸಿಗುತ್ತಿತ್ತು.

ಒಂದು ಬರಡು ಆಕಳು ಹುಲ್ಲುಗಾವಲಿನಲ್ಲಿ  ಮೆಂದು ಹೊಟ್ಟೆ ತುಂಬಿಸಿ ಬಂದು ಕೊಟ್ಟಿಗೆಯಲ್ಲಿ  ಮಲ ಮೂತ್ರ ವಿಸರ್ಜಿಸಿದರೆ ಅದರಲ್ಲಿ ತನ್ನ ಶಾರೀರಿಕ ಶಕ್ತಿ  ಬಳಕೆಗೆ ಉಪಯೋಗವಾಗಿ ಉಳಿಯುವ ಸತ್ವಗಳು ಮಾತ್ರ ಮಲ ಮೂತ್ರದಲ್ಲಿರುತ್ತವೆ.

 • ಸಣ್ಣ ಕರುವು ತಿನ್ನುವ ಆಹಾರವೂ ಕಡಿಮೆ, ಅದು ಹೊರ ಹಾಕುವ ಮಲ ಮೂತ್ರವೂ ಕಡಿಮೆ.
 • ಒಂದು ಉತ್ತಮ ಹಾಲೂಡುವ ಹಸುವಿಗೆ ನಾವು ಕೊಡುವ ಆಹಾರವೂ ಹೆಚ್ಚು.
 • ಅದು ಬಳಕೆ ಮಾಡುವುದೂ ಹೆಚ್ಚು. ವಾಪಾಸು  ಕೊಡುವುದೂ  ಹೆಚ್ಚು ಇರುತ್ತದೆ.

ಪ್ರಾಣಿಗಳ ಬಗೆ, ವಯಸ್ಸು, ಸೇವಿಸಲು ಕೊಡುವ ಆಹಾರ ಮತ್ತು ಅದು ಮೇಯುವಾಗ ತಿನ್ನುವ ಆಹಾರದ ಮೇಲೆ ಅದರ ಮಲ ಮೂತ್ರದಲ್ಲಿ ಪೋಷಕಗಳ ಪ್ರಮಾಣ ವ್ಯತ್ಯಾಸವಾಗುತ್ತದೆ.

ಯಾವುದರಲ್ಲಿ ಹೆಚ್ಚು ಸತ್ವಗಳಿವೆ:

 • ಕುರಿ, ಆಡಿನ ಹಿಕ್ಕೆಯಲ್ಲಿ ದನಕರುಗಳ ಸಗಣಿಯಲ್ಲಿರುವುದಕ್ಕಿಂತ  ಅಧಿಕ ಪೋಷಕಗಳಿರುತ್ತವೆ. ಇದರಲ್ಲಿ ನೀರಿನ ಅಂಶ ಕಡಿಮೆ ಇರುತ್ತದೆ.
 • ಪ್ರಾಣಿಗಳಿಗೆ ಮೇಯಲು ಕೊಡುವ ಆಹಾರ ಹೆಚ್ಚು ಪೌಷ್ಟಿಕವಾಗಿದ್ದರೆ, ಅದು ಮೇಯುವ ಆಹಾರ ಸತ್ವಾಂಶಗಳಿಂದ ಕೂಡಿದ್ದರೆ, ಅದರ ಮಲ ಮೂತ್ರದಲ್ಲಿ ಪೋಷಕಗಳ ಪ್ರಮಾಣ ಹೆಚ್ಚು ಇರುತ್ತದೆ.
 • ಬೆಳವಣಿಗೆ ಹೊಂದುತ್ತಿರುವ, ಎಳೆ ಪ್ರಾಯದ ಮತ್ತು ಆರೋಗ್ಯವಂತ, ಬಯಲಿಗೆ ಮೇಯಲು ಹೋಗುವ ಪ್ರಾಣಿಗಳು ತಾವು ತಿಂದ ಆಹಾರವನ್ನು ದೇಹದ ಶಕ್ತಿ ಉತ್ಪಾದನೆಗಾಗಿ ಹೆಚ್ಚು ಬಳಕೆ ಮಾಡಿಕೊಳ್ಳುವ ಕಾರಣ ಅದರಿಂದ ದೊರೆತ ಮಲ ಮೂತ್ರ ಕಡಿಮೆ ಪೋಷಕಗಳನ್ನು  ಹೊಂದಿರುತ್ತವೆ.
 • ಹಾಲು ಉತ್ಪಾದನೆ ಮಾಡುವ ಹಸು, ಎಮ್ಮೆಗಳು, ಹೊಲದಲ್ಲಿ ಕೆಲಸ ಮಾಡುವ ಕೋಣ, ಎತ್ತುಗಳು ದೇಹದ ಬೆಳವಣಿಗೆಗೆ, ತಾವು ಸೇವಿಸಿದ ಆಹಾರದಿಂದ ಹೆಚ್ಚು ಪೋಷಕಗಳನ್ನು ಬಳಕೆ ಮಾಡಿಕೊಳ್ಳುವ ಕಾರಣ ಅದರಲ್ಲಿ ಸತ್ವಾಂಶಗಳು ಕಡಿಮೆ  ಇರುತ್ತವೆ.
 • ಪ್ರಾಣಿಗಳ ತ್ಯಾಜ್ಯಗಳಾದ ಮಲ ಮೂತ್ರಗಳೆಂದರೆ, ಅವು ತಿಂದ ಆಹಾರ ಪಚನವಾಗದೇ ಉಳಿಯುವ ಭಾಗಗಳು.
 • ಅದರಲ್ಲಿ ಪ್ರಾಣಿಯ ಪಚನಾಂಗಗಳಲ್ಲಿರುವ ಪಾಚಕ ರಸಗಳ (Digestive juice) ಕ್ರಿಯೆಗಳಿಂದ ನಿರ್ಮಾಣಗೊಂಡ ಕೆಲವು ಸಂಯುಕ್ತಗಳು, ಪಚನಾಂಗದ ಸವಕಳಿ ಹೊಂದಿದ  ಭಾಗಗಳು  ಮತ್ತು ಅಸಂಖ್ಯ  ಬ್ಯಾಕ್ಟೀರಿಯಾ  ಹಾಗೂ ಮೇವಿನ ಸಂಗಡ ಒಳ ಸೇರಿದ ಧೂಳಿನ ಕಣಗಳು  ಸೇರಿರುತ್ತವೆ.

ಹಸುಗಳು ಹೊಲ, ಗೋಮಾಳ, ಕಾಡು ಮೇಡುಗಳಲ್ಲಿ ಮೆಂದು ವೈವಿದ್ಯಮಯವಾದ ಸೊಪ್ಪು ಸದೆಗಳನ್ನು ತಿನ್ನುತ್ತಿದ್ದವು

ತಕ್ಷಣ ಲಭ್ಯವಾಗದು:

 • ಈ ತ್ಯಾಜ್ಯಗಳು ಸಸ್ಯಗಳಿಗೆ ತಕ್ಷಣವೇ ದೊರೆಯುವ ರೂಪದಲ್ಲಿರುವುದಿಲ್ಲ.
 • ಪ್ರಾಣಿಗಳು ಮೇವನ್ನು ತಿಂದು ಅರೆದು, ಮೆಲುಕು ಹಾಕಿ ಹುಡಿ ಮಾಡಿ ಹೊರ ಹಾಕುತ್ತವೆಯಾದರೂ, ಅವು ಹೊರವಾತಾವರಣದಲ್ಲಿ ಸೂಕ್ಷ್ಮಜೀವಿಗಳ ಜೊತೆ ಬೆರೆಯದೆ ಸಸ್ಯಗಳು ಬಳಸಿಕೊಳ್ಳುವಂತಿಲ್ಲ.
 • ಇತರ ಗಾತ್ರ ದೊಡ್ದದಿರುವ ವಸ್ತುಗಳಿಗಿಂತ ಬೇಗ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.
 • ಹಾಗಾಗಿ ಸೊಪ್ಪು ಸದೆ, ಹುಲ್ಲುಗಳನ್ನು ನೇರ ಬಳಕೆ ಮಾಡುವುದಕ್ಕಿಂತ  ಪ್ರಾಣಿಗಳು ತಿಂದು ಹೊರ ಹಾಕಿದಾಗ ಬಳಕೆ ಮಾಡಿದರೆ  ಬೇಗ ಸಸ್ಯಗಳಿಗೆ  ದೊರೆಯುತ್ತದೆ.
 • ಪಚನಾಂಗದಲ್ಲಿ ಪಚನಗೊಂಡ ಮೇವು ಹಾಗೂ ನೀರು, ಪ್ರಾಣಿಯ ರಕ್ತಕ್ಕೆ ಸೇರಿ, ವಿವಿಧ ಅಂಗಗಳಿಗೆ ವಿತರಣೆಯಾಗುತ್ತದೆ.
 • ಇದರಲ್ಲಿ ಪ್ರಾಣಿಗೆ ನಿಶ್ಪ್ರಯೋಜಕವಾದ ಸಂಯುಕ್ತಗಳು ನೀರಿನಲ್ಲಿ ಕರಗಿ ಮೂತ್ರ ರೂಪದಲ್ಲಿ ಹೊರ ಬರುತ್ತವೆ.
 • ಮೂತ್ರದಲ್ಲಿ 95-96% ನೀರೇ ಇರುತ್ತದೆ. 4-5 % ಘನ ಪದಾರ್ಥ ಇರುತ್ತದೆ.   ಅದರಲ್ಲಿ ಅರ್ಧ ಪಾಲು ಯೂರಿಯಾವೇ ಇರುತ್ತದೆ.
 • ಮೂತ್ರದಲ್ಲಿ ಇರುವ ಎಲ್ಲಾ ಸಾರಾಂಶಗಳೂ ನೀರಿನಲ್ಲಿ ಕರಗಬಲ್ಲವುಗಳು. ಸಸ್ಯಗಳಿಗೆ ತಕ್ಷಣ ದೊರೆಯಬಲ್ಲವುಗಳು.
 • ಇದರಲ್ಲಿರುವ ಸಾರಜನಕ , ರಂಜಕ ಮತ್ತು ಪೊಟ್ಯಾಶಿಯಂಗಳು ಸಹ ಸಸ್ಯಗಳು ತಕ್ಷಣ ಹೀರಿಕೊಳ್ಳುವ ರೂಪದಲ್ಲಿರುತ್ತವೆ.
 • ಅದರೆ ಸಗಣಿ ಮಾತ್ರ ಸೂಕ್ಷ್ಮ ಜೀವಿಗಳು ಬಳಸಿಕೊಂಡ ನಂತರವೇ ಸಸ್ಯಗಳಿಗೆ ದೊರೆಯುತ್ತದೆ.
 • ಸುಲಭವಾಗಿ ಪಚನಗೊಳ್ಳಬಲ್ಲ ಆಹಾರವನ್ನು ಪಶುಗಳಿಗೆ ಒದಗಿಸಿದಾಗ ಅವುಗಳ ಮೂತ್ರದಲ್ಲಿ ಪೋಷಕಗಳು ಅಧಿಕಗೊಳ್ಳುತ್ತವೆ.
 • ಸುಲಭವಾಗಿ ಜೀರ್ಣವಾಗಬಲ್ಲ ಪೋಷಕಾಂಶ ಸಾರಜನಕವಾಗಿದ್ದು, ಅದೇ ಮೂತ್ರದಲ್ಲಿ ಹೆಚ್ಚು ಇರುತ್ತದೆ.
 • ರಂಜಕ ಮತ್ತು ಪೊಟಾಶಿಯಂ ಸತ್ವಗಳು ಸಹ ಮೂತ್ರದ ಮೂಲಕ ಹೊರ ಬರುತ್ತವೆ.
 • ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಎರಡೂ ಸಾರಗಳು  ಸಗಣಿಯ ಮೂಲಕ ಹೊರ ಬರುತ್ತವೆ.
ಸಗಣಿ ಗೊಬ್ಬರ ಒಂದನ್ನೇ ಬಳಸುವವರು ಪರಿಪೂರ್ಣ ಗೊಬ್ಬರ ಆಗಬೇಕಿದ್ದರೆ ಅದಕ್ಕೆ ರಂಜಕ ಮೂಲದ ಗೊಬ್ಬರ ಮತ್ತು ಪೊಟ್ಯಾಶ್ ಮೂಲದ ಗೊಬ್ಬರವನ್ನು ಸೇರಿಸಬೇಕು. ಅದು ಸಾವಯವ ಮೂಲದ್ದೂ ಆಗಬಹುದು. 

ಸಗಣಿ ಗೊಬ್ಬರ ಸಂಪೂರ್ಣ ಸಮೃದ್ಧ ಗೊಬ್ಬರ ಎನ್ನುತ್ತೇವೆ, ಆದರೆ ಆದರಲ್ಲಿ ಇರುವುದು 95% ಕ್ಕೂ ಹೆಚ್ಚು ನೀರು ಮಾತ್ರ. ನೀರಿಗಾಗಿ ದುಡ್ಡು ಕೊಡಬೇಕೆ – ನಮ್ಮ ಮುಂದಿರುವ   ಪ್ರಶ್ನೆ.

Leave a Reply

Your email address will not be published. Required fields are marked *

error: Content is protected !!