ಗೊಬ್ಬರ ನಂತರ ಕೊಡಿ- ಉಚಿತವಾಗಿ ಸಿಗುವ ಇದನ್ನು ಮೊದಲು ಒದಗಿಸಿ.

ಚೆನ್ನಾಗಿ ಬಿಸಿಲು ಪಡೆಯುವ ತೆಂಗಿನ ಮರಗಳು.

ನಾವು ಬೆಳೆ ಬೆಳೆಸುವಾಗ ಯಾವ ಗೊಬ್ಬರ ಕೊಡಬೇಕು, ಎಷ್ಟು ಕೊಡಬೇಕು. ಮತ್ತೆ ಏನೇನು ಕೊಡಬೇಕು ಎಂದು ಕೇಳುತ್ತೇವೆ. ಅದೆಲ್ಲಾ ನಂತರ. ಮೊದಲು ಉಚಿತವಾಗಿ ಸಿಗುವ ಬಿಸಿಲು ಪೂರ್ಣವಾಗಿ ಸಿಗುವಂತೆ ಮಾಡಿ.

ದಾರಿ  ಬದಿಯ ತೆಂಗಿನ ಮರದಲ್ಲಿ ಫಸಲು ಯಾಕೆ ಹೆಚ್ಚು, ತೋಟದೊಳಗಿನ ಅಡಿಕೆ ಮರಳು ಉದ್ದುದ್ದ ಬೆಳೆಯುವುದೇಕೆ? ಬೆಳಗ್ಗಿನಿಂದ ಸಂಜೆ ತನಕ ಬಿಸಿಲು ಪಡೆಯುವ ದೊಡ್ಡ ಮರಗಳಲ್ಲಿ ಫಸಲು ಹೆಚ್ಚು ಏಕೆ? ಎತ್ತರ  ಬೆಳೆದ ಮರದಲ್ಲಿ ಫಸಲು ಹೆಚ್ಚು ಯಾಕೆ? ಇದಕ್ಕೆಲ್ಲಾ ಪ್ರಮುಖ ಕಾರಣ ಸೂರ್ಯನ ಬೆಳಕಿನ ಲಭ್ಯತೆ.

 • ಪ್ರಕೃತಿ ಕೊಟ್ಟ ಉಚಿತ ಬೆಳೆ ಪೋಷಕ ಎಂದರೆ ನೀರು, ಗಾಳಿ ಮತ್ತು ಬೆಳಕು.
 • ಈ ಮೂರನ್ನು ಸರಿಯಾಗಿ ಬಳಸಿಕೊಂಡಲ್ಲಿ  ಬೇಸಾಯದಲ್ಲಿ ಬೆಳೆ ಪೋಷಣೆ ಜೊತೆಗೆ ಬೆಳೆ ಸಂರಕ್ಷಣಾ ಖರ್ಚನ್ನು ತುಂಬಾ ಕಡಿಮೆ ಮಾಡಬಹುದು.
 • ಆದರೆ ಅದರ ಕಡೆಗೆ ನಾವು ಹೆಚ್ಚು ಗಮನ ಕೊಡುತ್ತಿಲ್ಲ.
 • ಗೊಬ್ಬರ, ಗೊಬ್ಬರ ಎಂದು ಸುರಿಯುತ್ತಾ ಬಂದರೆ ಅದು ಅಂತಹ ಫಲಿತಾಂಶ ಕೊಡುವುದಿಲ್ಲ.
ಇಂತಹ ಅಡಿಕೆ ಮರಗಳು ಹೆಚ್ಚು ಫಲಕೊಡುವುದಕ್ಕೆ ಕಾರಣ ಬೆಳಕೇ ಆಗಿರುತ್ತದೆ.
ಇಂತಹ ಅಡಿಕೆ ಮರಗಳು ಹೆಚ್ಚು ಫಲಕೊಡುವುದಕ್ಕೆ ಕಾರಣ ಬೆಳಕೇ ಆಗಿರುತ್ತದೆ.

ಒಂದು ಸಸ್ಯಕೆ ಚೆನ್ನಾಗಿ ಗಾಳಿ ಬೆಳೆಕು ಬಿದ್ದರೆ ಅದರ ಪೂರ್ಣ ಸಾಮರ್ಥ್ಯದ ಹೂ ಬಿಡುತ್ತದೆ. ಕಾಯಿ ಕಚ್ಚುತ್ತದೆ. ಫಲವೂ ಕೊಡುತ್ತದೆ. ರೋಗ ರುಜಿನಗಳೂ ಕಡಿಮೆ ಇರುತ್ತವೆ. ನೀರು ಉಚಿತವಾಗಿ ಸಿಕ್ಕಿದೆ ಎಂದು ಬೇಕಾದಷ್ಟು ಕೊಡುತ್ತೇವೆ. ಆದರೆ ಬೇರು ಕೊಳೆತು, ಮಣ್ಣು ಹಾಳಾಗಿ ಬೆಳೆ ಕೈಕೊಡುತ್ತದೆ. ಪ್ರಕೃತಿಯ ಈ ಕೊಡುಗೆಗಳನ್ನು ಬುದ್ದಿವಂತಿಕೆಯಲ್ಲಿ ಬಳಸಿಕೊಳ್ಳಬೇಕು.

ಬೆಳಕು ಚೆನ್ನಾಗಿದ್ದರೆ ಎಲ್ಲವೂ ಓಕೆ:

 • ಇತ್ತೀಚೆಗೆ ಕೆಲವರು ಕಾಫಿಯನ್ನು ಪೂರ್ಣ ಬಿಸಿಲಿನಲ್ಲಿ ಬೆಳೆಯಲು ಪ್ರಾರಂಭಿಸಿದ್ದಾರೆ.
 • ಕಾಡು ಮರಗಳ ನೆರಳಿನ ಅಡಿಯಲ್ಲಿ ಬೆಳೆಸಿದ್ದಕ್ಕಿಂತ ಹೆಚ್ಚು ಇಳುವರಿ ಇದರಲ್ಲಿ ಬರುತ್ತದೆ ಎಂಬುದು ಬ್ರೆಝಿಲ್ ನಲ್ಲಿ ಸಾಬೀತಾಗಿದೆ.
 • ಹಾಗೆಯೇ ಕೆಲವು ರೈತರು ವಿಯೆಟ್ನಾಂ ಮಾದರಿಯಲ್ಲಿ ಪೂರ್ಣ ಬಿಸಿಲಿನಲ್ಲಿ ಕರಿಮೆಣಸು ಬೆಳೆಯುವುದನ್ನೂ ಪ್ರಾರಂಭಿಸಿದ್ದಾರೆ.
 • ಇದು ಸರಿಯಾಗಿ ಮಾಡಿದರೆ ಯಶಸ್ವಿಯೂ ಸಹ.
 • ಇಲ್ಲಿ  ಸೂರ್ಯನ ಬೆಳಕನ್ನು ಟ್ರಾಪ್  ಮಾಡಿ, ಸಾಂಪ್ರದಾಯಿಕ ಇಳುವರಿಗಿಂತ  ಹೆಚ್ಚು  ಇಳುವರಿ ಪಡೆಯಬಹುದು.

ಬೆಳೆ ಬೆಳೆಸುವಾಗ ,ಉತ್ತಮ ಬೀಜ, ಹೊಲದ ಸಿದ್ದತೆ, ಗೊಬ್ಬರ,  ಸಮರ್ಪಕ ಬೇಸಾಯ  ಪದ್ದತಿ ಇವೆಲ್ಲಕ್ಕಿಂತ ಪ್ರಾಮುಖ್ಯವಾದುದು ಬೆಳಕು. ಸೂರ್ಯನ ಮೂಲಕ ಭೂಮಿಗೆ ಉಚಿತವಾಗಿ  ದೊರೆಯುವ ಬೆಳಕು ಎಲ್ಲಾ  ಜೀವ ರಾಶಿಗಳಿಗೂ ಜೀವ ಚೈತನ್ಯ ಕೊಡುವ ಪ್ರಾಮುಖ್ಯ ಆಹಾರ. ಇದನ್ನು ಪ್ರತೀಯೊಬ್ಬ ಕೃಷಿಕನೂ ತಿಳಿಯಬೇಕಿದೆ.

ಉಚಿತವಾಗಿ ಸಿಗುವ ಬೆಳಕು ಪಡೆದ ಮರ
ಉಚಿತವಾಗಿ ಸಿಗುವ ಬೆಳಕು ಪಡೆದು ಬೆಳೆದ ಫಲಭರಿತ ತೆಂಗಿನ ಮರ

ಬೆಳೆಕಿನಿಂದ ಇಳುವರಿ ಹೆಚ್ಚುತ್ತದೆ:

 • ನಾವೆಲ್ಲಾ ಸೂರ್ಯನ ಬೆಳಕಿನ ಸಹಾಯದಿಂದ ಸಸ್ಯಗಳು ಆಹಾರೋತ್ಪಾದನೆ ಕ್ರಿಯೆ (ದ್ಯುತಿಸಂಸ್ಲೇಷಣ) ನಡೆಸಿ ಆರೋಗ್ಯವಾಗಿ ಬದುಕುತ್ತವೆ ಎಂದು ಓದಿದ್ದೇವೆ.
 • ಯಾವ ದಿಕ್ಕಿನಲ್ಲಿ ಸೂರ್ಯನ  ಬೆಳಕು ದೊರೆಯುತ್ತದೆಯೋ ಆ ದಿಕ್ಕಿಗೆ  ಸಸ್ಯದ ಹಸುರು ಬೆಳವಣಿಗೆ,  ಬೇರಿನ ಬೆಳವಣಿಗೆ ಹೆಚ್ಚು ಇರುತ್ತದೆ.
 •  ಬೆಳೆಕಿನ ಕೊರತೆ ಆದಾಗ ಸಸ್ಯಗಳು ಯಾವುದೇ ಬೇರೆ ಪೋಷಕಾಂಶಗಳಿಗೆ ಸ್ಪಂದಿಸುವುದಿಲ್ಲ.

ಕೃಷಿಕರಾದ ನಾವು ಬೆಳೆ ಪೋಷಣೆ  ಮತ್ತು ನಿರ್ವಹಣೆಗೆ ನೀಡಿದಷ್ಟು ಮಹತ್ವವನ್ನು  ಬೆಳಕಿಗೆ ನೀಡುವುದಿಲ್ಲ. ಪ್ರತೀಯೊಂದು ಬೆಳೆಗೂ ಇಂತಿಷೇ ಪ್ರಮಾಣದ ಬೆಳಕು ಬೇಕು  ಎಂದು ಅಂದಾಜು ಮಾಡಲಾಗಿದೆ. ಬೆಳಕು ಎಲ್ಲಾ ಬೆಳೆಗಳಿಗೂ ಅದು ಬೇಕು. ಹಾಗೆಂದು ಕೆಲವು ಬೆಳೆಗಳಿಗೆ ಇಂತಿಷ್ಟೇ ಪ್ರಮಾಣದಲ್ಲಿ ಬೇಕು ಎಂಬುದು ಇದೆ. ದ್ರಾಕ್ಷಿಗೆ ಅಧಿಕ ತಾಪಮಾನ ಸಹಿಷ್ಣುವಾದರೆ , ಅಡಿಕೆಗೆ ಅಷ್ಟು ಬೇಡ. ಹೀಗೆಲ್ಲಾ ಇತಿಮಿತಿಗಳು ಇರುತ್ತವೆ.

 • ಅದನ್ನು ಲಕ್ಸ್ ಎಂಬ ಮಾಪನದಲ್ಲಿ ಅಳೆಯಲಾಗುತ್ತದೆ.
 • ಕೆಲವು ಹೆಚ್ಚು  ಬೆಳಕನ್ನು ಅಪೇಕ್ಷಿಸಿದರೆ ಮತ್ತೆ ಕೆಲವು ಆಂಶಿಕ ಬೆಳಕನ್ನು  ಬಯಸುತ್ತವೆ.
 • ಆದಾಗ್ಯೂ ಹೆಚ್ಚಿನೆಲ್ಲಾ ಸಸ್ಯಗಳು ಅಧಿಕ ಪ್ರಮಾಣದಲ್ಲಿ ಬೆಳಕನ್ನು  ಬಯಸುತ್ತವೆ.
 • ಸೂರ್ಯನ  ಬಿಸಿಲು  ಎಲ್ಲಾ ನಮೂನೆಯ ಬೆಳೆಗಳ ಆರೋಗ್ಯಕ್ಕೆ, ಇಳುವರಿಗೆ ಅತೀ ಅಗತ್ಯವಾಗಿದ್ದು, ನಾವು ನೆರಳಲ್ಲಿ ಮಾತ್ರವೇ ಬೆಳೆಯುವುದೆಂದು ತಿಳಿದಿರುವ ಬೆಳೆಗಳಿಗೂ ಸಹ  ಪೂರ್ಣ ಸೂರ್ಯನ ಬೆಳಕು ದೊರೆತಲ್ಲಿ ಇಳುವರಿ ಗಣನೀಯವಾಗಿ ಹೆಚ್ಚಳವಾಗುವುದು.
 • ಬ್ರೆಜಿಲ್ ದೇಶದವರು ಒಂದು ಕಾಫೀ ಗಿಡದಲ್ಲಿ ಸರಾಸರಿ  10 ಕಿಲೋ ಗೂ ಹೆಚ್ಚು ಕಾಫಿ ಬೀಜವನ್ನು ಪಡೆದರೆ, ನಾವು ಸರಾಸರಿ 3 ಕಿಲೋ ಪಡೆಯುತ್ತೇವೆ.
 • ವಿಯೆಟ್ನಾಂ ದೇಶದಲ್ಲಿ ಒಂದು ಮೆಣಸಿನ  ಗಿಡದಲ್ಲಿ ಸರಾಸರಿ 5 ಕಿಲೋ ಇಳುವರಿ ಪಡೆಯುತ್ತಾರೆ.
 • ನಾವು ಸರಾಸರಿ 1 ಕಿಲೋ ಮೀರಿಲ್ಲ. ಇವರು ಸೂರ್ಯನ ಬಿಸಿಲನ್ನು  ಸರಿಯಾಗಿ ಬಲಸಿಕೊಳ್ಳುತ್ತಾರೆ.
 • ಮಣ್ಣಿಗೆ ಬಿಸಿಲು ಬಿದ್ದರೆ ಮಣ್ಣಿನ ಫಲವತ್ತತೆ ಮತ್ತು ಬೌತಿಕ ಗುಣ ನವೀಕರಣವಾಗುತ್ತದೆ.
 • ತೋಟದ ಮಣ್ಣಿನ ಫಲವತ್ತತೆಗೂ ಗದ್ದೆ ಮಣ್ಣಿನ ಫಲವತ್ತತೆಗೂ ಇದೇ ವ್ಯತ್ಯಾಸ.
ಅಸಮರ್ಪಕ ಬಿಸಿಲು ಪಡೆದ ತೆಂಗಿನ ಮರ.
ಅಸಮರ್ಪಕ ಬಿಸಿಲು ಪಡೆದ ತೆಂಗಿನ ಮರ.

ಬ್ರೆಝಿಲ್ ದೇಶದಲ್ಲಿ ಕಾಫಿಯನ್ನು ನೆರಳು ಇಲ್ಲದೆ ತೆರೆದ ವಾತವರಣದಲ್ಲಿ ಬೆಳೆಯುತ್ತಾರೆ. ಸಸ್ಯಕ್ಕೆ  ಪ್ರೂನಿಂಗ್ ಮಾಡುವುದಿಲ್ಲ. ಹೆಚ್ಚು ಗೆಲ್ಲುಗಳನ್ನು ಬೆಳೆಯಲು ಬಿಟ್ಟು ಅವುಗಳಲ್ಲೆಲ್ಲಾ ಕಾಯಿ ಬಿಟ್ಟಾಗ ಆ ಗೆಲ್ಲುಗಳು ಬಾಗುತ್ತವೆ. ಆಗ ಎಲ್ಲಾ ಗೆಲ್ಲುಗಳಿಗೂ ಗಾಳಿ ಬೆಳಕು ಪ್ರಸಾರವಾಗುತ್ತದೆ.   ಅದೇ ರೀತಿಯಲ್ಲಿ ವಿಯೆಟ್ನಾಂ ದೇಶದಲ್ಲಿ ಕರಿಮೆಣಸನ್ನು ಸಹ ಏಕ ಬೆಳೆಯಾಗಿ ಬೆಳೆಯುತ್ತಾರೆ. ಚೆನ್ನಾಗಿ ಹೂ ಬಿಡುತ್ತದೆ. ಹೆಚ್ಚು ಕಾಯಿ ಆಗುತ್ತದೆ. ಆದರೆ ಆ ಬೆಳೆ ಅಧಿಕ ತಾಪಮಾನ ಸಹಿಸದ ಬೆಳೆಯಾದ ಕಾರಣ ಅಪಕ್ವ ಬೆಳವಣಿಗೆ ಉಂಟಾಗುತ್ತದೆ.

ರೋಗ ರುಜಿನ- ಕೀಟ ಎಲ್ಲವೂ ಕಡಿಮೆ:

 • ಸಸ್ಯಗಳಿಗೆ  ಬರೇ ಬೆಳವಣಿಗೆಗೆ ಮತ್ತು ಇಳುವರಿಗೆ ಮಾತ್ರ ಬೆಳಕು-ಗಾಳಿ ಅವಶ್ಯಕವಲ್ಲ.
 • ಇದು ಸಸ್ಯ ಆರೋಗ್ಯಕ್ಕೂ ಅಗತ್ಯ. ಎಲ್ಲಿ ಗಾಳಿ ಬೆಳಕು ಯತೇಚ್ಚವಾಗಿ ದೊರೆಯುವುದೋ ಅಲ್ಲಿ ರೋಗ,ಕೀಟಗಳೂ ಕಡಿಮೆ ಇರುತ್ತದೆ.
 • ಮೊಡ ಇದ್ದಾಗ ಕೀಟ , ರೋಗ ಹೆಚ್ಚು. ಬಿಸಿಲೇ ಇದ್ದಾಗ ಕಡಿಮೆ. ಬಿಸಿಲಿನ ಎದುರು ಯಾವ ರೋಗ ಕಾರಕಗಳೂ ಬದುಕಲಾರವು.
 • ಮಣ್ಣಿಗೆ ಬಿಸಿಲು ಬಿದ್ದಾಗ ಮಣ್ಣಿನ ರಸಸಾರ ವ್ಯತ್ಯಾಸವಾಗುವುದೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಚೆನ್ನಾಗಿ ಬಿಸಿಲು ಬಿದ್ದ ದ್ರಾಕ್ಷೀ ಹಣ್ಣಿನ ಬಣ್ಣ- ಈ ಹಣ್ಣಿನ ರುಚಿ ಅಪರಿಮಿತ.
ಚೆನ್ನಾಗಿ ಬಿಸಿಲು ಬಿದ್ದ ದ್ರಾಕ್ಷೀ ಹಣ್ಣಿನ ಬಣ್ಣ- ಈ ಹಣ್ಣಿನ ರುಚಿ ಅಪರಿಮಿತ.

ನಾವು ಕೃಷಿ ಮಾಡುವಾಗ ಎಲ್ಲವನ್ನೂ ಗಮನಿಸುತ್ತೇವೆ. ಆದರೆ ಉಚಿತವಾಗಿ ದೊರೆಯುವ ಈ ಎರಡು ಅವಶ್ಯಕತೆಯ ಕಡೆಗೆ ಹೆಚ್ಚು ಗಮನ ನೀಡುವುದಿಲ್ಲ. ಯಾವುದೇ ಬೆಳೆಗೂ  ಸಾಕಷ್ಟು ಬೆಳಕು ಬೇಕು.

 • ಬೆಳಕು ದೊರೆಯುವುದರಿಂದ ಸಸ್ಯದ ಬೆಳವಣಿಗೆಯ ಗತಿ ಭಿನ್ನವಾಗಿರುತ್ತದೆ.
 • ಬೇಗ ಮತ್ತು ಅಧಿಕ ಇಳುವರಿಯನ್ನೂ ಕೊಡುತ್ತದೆ. ಸಾಮಾನ್ಯವಾಗಿ ಹಣ್ಣಿನ ಬೆಳೆಗಳಲ್ಲಿ TSS ಅಂಶದ  ಮೇಲೆ ಅದರ ರುಚಿ ನಿಂತಿರುತ್ತದೆ.
 • ಚೆನ್ನಾಗಿ ಬಿಸಿಲು ಬೀಳುವ  ಸ್ಥಳದಲ್ಲಿರುವ ಅಡಿಕೆ, ತೆಂಗು ಮುಂತಾದ ಮರಗಳು ಕಡಿಮೆ ಬಿಸಿಲು ಬೀಳುವ ಮರಗಳಿಗಿಂತ 25% ಕುಬ್ಜವಾಗಿರುತ್ತವೆ.

ಯಾವುದೇ ಬೆಳೆ ಇರಲಿ, ಅದರ ಫಲ ರುಚಿಯಾಗಿರಬೇಕಾದರೆ ಅದಕ್ಕೆ ಬಿಸಿಲೇ ಬೇಕು. ಎಲ್ಲಾ ಹಣ್ಣು ಹಂಪಲುಗಳೂ ಸಿಹಿಯಾಗಿ ರುಚಿಕಟ್ಟಾಗಿ ತಮ್ಮ ಎಲ್ಲಾ ಪೌಷ್ಟಿಕಾಂಶಗಳೊಂದೆಗೆ ಪಕ್ವವಾಗಿರಲು  ಬೆಳಕು ಮತ್ತು ಗಾಳಿ ಯತೇಚ್ಚವಾಗಿ ದೊರೆತಿರಬೇಕು.  ಗೊಬ್ಬರ ಇತ್ಯಾದಿ ನಂತರ . ನಿಮ್ಮ ತೋಟಕ್ಕೆ ಮಳೆಗಾಲದಲ್ಲಿ ಹೆಚ್ಚು ಬಿಸಿಲು, ಗಾಳಿ ಬೀಳಲಿ. ಆಗ ಇಳುವರಿ ಹೆಚ್ಚುತ್ತದೆ. ಖರ್ಚು ಇಲ್ಲದೆ ಇದು ದೊರೆಯುವ ಲಾಭ.
end of the article:—————————————————————
search words: light and plants#  natural gift of plant energy# sun light and crop production# sunlight# natural energy #

Leave a Reply

Your email address will not be published. Required fields are marked *

error: Content is protected !!