ಹುಳ ಇಲ್ಲದ ಮಾವಿನ ಹಣ್ಣು ಆಯ್ಕೆ ಹೇಗೆ?

ಸಿಪ್ಪೆಯಲ್ಲಿ ಯಾವ ಕಲೆಯು ಇಲ್ಲದಿದ್ದರೆ ಹುಳ ಇಲ್ಲ ಎಂದು ನಂಬಬಹುದು

ಮಾವಿನ ಹಣ್ಣು ಖರೀದಿಸಿದ್ದೇ ಇರಲಿ, ಮನೆಯದ್ದೇ ಇರಲಿ. ಇಡೀ ಮಾವಿನ ಹಣ್ಣನ್ನು ಮಾತ್ರ ಕಚ್ಚಿ ಚೀಪಿ ರಸ ಕುಡಿಯುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ. ಕಾರಣ ಇಷ್ಟೇ ಹಣ್ಣು ನೋಡಲು ಎಷ್ಟೇ ಆಕರ್ಷಕವಾಗಿರಲಿ, ಒಳಗೆ ಹುಳ ಇದ್ದರೆ ಎಂಬ ಭಯ. ಜಾಗರೂಕತೆಯಲ್ಲಿ ಹಣ್ಣಿನ ಮೇಲ್ಮೈ ಗಮನಿಸಿ ಆರಿಸಿದರೆ ಹುಳ  ಇಲ್ಲದ ಮಾವನ್ನು ಪಡೆಯಬಹುದು.   

      

  • ಅಂಗಡಿಯಲ್ಲಿ ಮಾವಿನ ಹಣ್ಣನ್ನು ಕಂಡೊಡನೆ ಎಂತವನಿಗೂ ಎಂತವನಿಗೂ ಸ್ವಲ್ಪ ಖರೀದಿ ಮಾಡೋಣ ಎನ್ನಿಸುತ್ತದೆ.
  • ಮನೆ ಹಿತ್ತಲಲ್ಲಿ ಬೆಳೆದ ಮಾವಿನ ಕಾಯಿ ಕೊಯಿದು ಹಣ್ಣು ಮಾಡಿ ತಿನ್ನುವುದೆಂದರೆ ಅದೆಂಥಹ ಖುಷಿ.
  •  ಒಮ್ಮೆ ಹುಳ ಸಿಕ್ಕರೆ ಮತ್ತೆ  ಮಾವು ಎಂದರೆ ಮಾರು ದೂರ ಆಗುವುದೇ.

ಪತ್ತೆ ಹೇಗೆ:

  • ಮಾವಿನ ಹಣ್ಣಿನಲ್ಲಿ ಹುಳ ಇದೆಯೇ ಇಲ್ಲವೇ ಎಂಬುದನ್ನು ಹೊರಗಿನಿಂತ ನೋಡಿಯೇ ಪತ್ತೆಮಾಡಲು ಬಹಳಷ್ಟು ಕೃಷಿಕರಿಗೂ ಗೊತ್ತಿಲ್ಲ.
  • ಗ್ರಾಹಕರಿಗಂತೂ ಗೊತ್ತೇ ಇಲ್ಲ. ಹುಳ ಇಲ್ಲದಿದ್ದರೆ ನಮ್ಮ ಪುಣ್ಯ ಎಂದು ತಿನ್ನುತ್ತಾರೆ.
  • ನಿಮ್ಮ ಮಾವಿನ ಮರದ ಮಾವಿನ ಕಾಯಿಯಲ್ಲಿ ಹುಳ ಇದೆಯೇ ಇಲ್ಲವೇ ಎಂಬುದನ್ನು ತಿಳಿಯಬೇಕಿದ್ದರೆ ಮಾವಿನ ಕಾಯಿಯ ಮೇಲೆಲ್ಲಾ ಒಂದು ದೃಷ್ಟಿ ಹಾಕಿ.
  • ಮಾವಿನ ಕಾಯಿಯ ಮೇಲೆ ಒಂದು ದುಂಬಿ (ಹಣ್ಣು ನೊಣ)  ಕುಳಿತಿದ್ದುದು ಕಂಡು ಬಂದರೆ ಆ ಮಾವಿನ ಮರದ ಹಣ್ಣುಗಳಲ್ಲಿ ಹುಳ ಇದೆ ಎಂದು ತಿಳಿಯಬಹುದು.
  • ಇದೇ ದುಂಬಿ ಮಾವಿನ ಕಾಯಿಯ ಮೇಲೆ ಕುಳಿತು ಮೊಟ್ಟೆ ಇಡುವುದು.
  • ಇದೇ ಮೊಟ್ಟೆ ಅಲ್ಲೇ ಬೆಳೆದು ಹುಳವಾಗುವುದು.
  • ಅದೇ ಹುಳನೆಲಕ್ಕೆ ಬಿದ್ದು, ಅಲ್ಲಿ ಪ್ಯೂಪೆ ಹಂತ ಮುಗಿಸಿ ದುಂಬಿಯಾಗುವುದು.

ಹುಳ ಇರುವ ಲಕ್ಷಣ

ಅಂಗಡಿಯಿಂದ ಮಾವಿನ ಹಣ್ಣು ಖರೀದಿಸುವಾಗ ಮಾವಿನ ಕಾಯಿ\ ಹಣ್ಣಿನ ಮೇಲ್ಮೈಯಲ್ಲಿ ಏನಾದರೂ ಕಪ್ಪು ಚುಕ್ಕೆ  ಇದೆಯೇನೋಡಿ. ಒಂದು ವೇಳೆ ಕಪ್ಪು ಚುಕ್ಕೆ ಇದ್ದರೆ ಅದು ಪೂರ್ತಿ ಹಣ್ಣಾಗುವಾಗ ಹುಳ ಇದ್ದೇ ಇರುತ್ತದೆ. ಯಾವ ಕಾಯಿಯಲ್ಲಿ ಯಾವುದೇ ಕಪ್ಪು ಕಲೆಗಳೂ ಇಲ್ಲದೆ ಇದ್ದರೆ  ಅದರಲ್ಲಿ  ಹುಳ ಇರುವ ಸಾಧ್ಯತೆ  ಕಡಿಮೆ.

ಎಲ್ಲಿ ಇಲ್ಲ:

  • ಹೊಸ ಜಾಗದಲ್ಲಿ ಒಂದು ಮಾವಿನ ಸಸಿ ನೆಡಿ.
  • ಮೊದಲ ಫಸಲಿನಲ್ಲಿ ಹುಳ ಇರುವುದಿಲ್ಲ.
  • ನಂತರ ಹುಳವೇ ಹುಳ.
  • ಕಾರಣ ಉದುರಿ ಬಿದ್ದ ಮಾವಿನ ಕಾಯಿಯಲ್ಲಿದ್ದ ಹುಳಗಳು ನೆಲದಲ್ಲಿ ವಾಸವಾಗಿದ್ದು, ಮತ್ತೆ ಮಾವಿನ ಕಾಯಿಯಾಗುವಾಗ ದುಂಬಿಯಾಗಿ ಹಣ್ಣಿನಲ್ಲಿ ಮೊಟ್ಟೆ ಇಡುತ್ತವೆ.

ಇಂತಹ  ಕಲೆಗಳು ಇದ್ದರೆ ಹುಳ ಇರುವ ಸಾಧ್ಯತೆ ಹೆಚ್ಚು

ಮಾವಿಗೆ ಹುಳ ಬಾರದಂತೆ ತಡೆ ಏನು?

  • ಮಾವಿನ ಮರದ ಬುಡವನ್ನು ಮನೆಯ ಅಂಗಳದಂತೆ ಸ್ವಚ್ಚವಾಗಿಡಿ.
  • ಒಂದೇ ಒಂದು ಕಾಯಿ ಬಿದ್ದರೂ ಅದನ್ನು ಕೂಡಲೇ ಸುಡಿ.
  • ಉದುರಿದ ತರಗೆಲೆಗಳನ್ನು ಬುಡದಲ್ಲೇ ರಾಶಿ ಹಾಕಬೇಡಿ
  •  ಫಸಲಿಗೆ ಮುಂಚೆ ಬುಡ ಭಾಗವನ್ನು ಸ್ವಲ್ಪ ಹೆರೆಸಿ ಸ್ವಚ್ಚ ಮಾಡಿ.
  • ಆಗ ನೆಲದಲ್ಲಿ ಅವಿತಿರುವ ಹುಳದ ಸಂಖ್ಯೆ ಕಡಿಮೆಯಾಗುತ್ತದೆ.
  • ಮಾವಿನ ಮರದಲ್ಲಿ ಮಿಡಿ ಕಾಣುವಾಗ ಒಂದು ಲಿಂಗಾಕರ್ಷಕ ಬಲೆ ( ಟ್ರಾಪು) ಹಾಕಿದರೆ ನೊಣಗಳ ಸಂತಾನೋತ್ಪತ್ತಿ ಕಡಿಮೆಯಾಗಿ ಅಲ್ಪ ಸ್ವಲ್ಪ ಮಾವು ಉಳಿಯಬಹುದು.

ಹಣ್ಣು ನೊಣ ಎಂಬ ದುಂಬಿ ಮಾವಿನ ಕಾಯಿಯಲ್ಲಿ ಕುಳಿತು ಮೊಟ್ಟೆ ಇಡುತ್ತದೆ. ಅದು ಹಣ್ಣು ಬಲಿಯುವ ಸಮಯದಲ್ಲಿ  ಮರಿಯಾಗುತ್ತದೆ. ಎಳೆಯದಿರುವಾಗ ಕೊಯ್ದು, ತ್ವರಿತ ಹಣ್ಣು ಮಾಡಿದಾಗ ಅದು ಮೊಟ್ಟೆಯಾಗಿರುವಾಗಲೇ ನಮ್ಮ ಹೊಟ್ಟೆ ಸೇರುತ್ತದೆ. ಅದಕ್ಕೇ ಹಣ್ಣಿನ ಮಾರಾಟಗಾರರು ತ್ವರಿತ ಹಣ್ಣು ಮಾಡಿ ತ್ವರಿತವಾಗಿ ಮಾರಾಟ ಮಾಡಿ ಕೈತೊಳೆದುಕೊಳ್ಳುವುದು. ವಾಣಿಜ್ಯಿಕ ಮಾವಿನ ವ್ಯವಸಾಯದಲ್ಲಿ ಕೀಟನಾಶಕ ಸಿಂಪರಣೆ  ಮಾಡಿಯೇ ಈ ಹಣ್ಣು ನೊಣ ನಿಯಂತ್ರಣ ಮಾಡಲಾಗುತ್ತದೆ.

ಹಣ್ಣು ನೊಣ ಇಲ್ಲದೆ ಮಾವು ಬೆಳೆಯುತ್ತದೆ ಎಂದು ಹೇಳುವುದು ಶುದ್ಧ ಸುಳ್ಳು. ಹಣ್ಣು ನೊಣ ಇದ್ದೇ ಇರುತ್ತದೆ. ಸ್ವಚ್ಚತೆ ಮತ್ತು ಕೆಲವು ನಿರ್ವಹಣೆ ಮಾಡಿದಲ್ಲಿ ಸ್ವಲ್ಪ ಕಡಿಮೆ ಇರುತ್ತದೆ.

Leave a Reply

Your email address will not be published. Required fields are marked *

error: Content is protected !!