ಕಳೆನಾಶಕ ಬಳಸುವಾಗ ವಹಿಸಬೇಕಾದ ಜಾಗ್ರತೆ.

  ಕೆಲವು ಜನ ರೌಂಡ್‍ಅಪ್ ಎಂದ ಕೂಡಲೆ ಭಯಭೀತರಾಗುತ್ತಾರೆ. ಒಬ್ಬೊಬ್ಬ ಒಂದೊಂದು ತರಹ ಮಾತಾಡುತ್ತಾರೆ.ಕೆಲವರಿಗಂತೂ ಈ ಹೆಸರು ಕೇಳಿದಾಕ್ಷಣ ಏನೋ ಅಲರ್ಜಿಯಾಗುತ್ತದೆ. ಬೇರೆ ಕಳೆನಾಶಕ ಆಗಬಹುದು, ಇದು ಬೇಡ ಎನ್ನುವವರೂ ಇದ್ದಾರೆ. ಎಲ್ಲಾ ಕಳೆನಾಶಕಗಳೂ ಒಂದೆ. ಕೆಲವು ನೇರ ಆಳಿಯ, ಕೆಲವು ಮಗಳ ಗಂಡ ಅಳಿಯ ಅಷ್ಟೇ ವ್ಯತ್ಯಾಸ.

  • ಬಹುಷಃ ನಮ್ಮ ಜನ ಒಂದು ಸುದ್ದಿಯನ್ನು ಎಷ್ಟರ ಮಟ್ಟಿಗೆ ನಂಬುತ್ತಾರೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ.
  • ಕೃಷಿಕರು- ಕೃಷಿ ಕೂಲಿ ಕಾರ್ಮಿಕರು, ದಾರಿ ಹೋಕರೂ ಸಹ ಕಳೆನಾಶಕ ಹೊಡೆದರೆ ಕ್ಯಾನ್ಸರ್ ಬರುತ್ತದಂತೆ ಎನ್ನುವಷ್ಟರ ಮಟ್ಟಿಗೆ, ಸುದ್ದಿಗಳು ಸುಗಂಧವನ್ನು ಪಸರಿಸಿದೆ.
  • ಕ್ಯಾನ್ಸರ್ ಬರಬಹುದು. ಅದು ಸೂಕ್ತ ಮುಂಜಾಗ್ರತಾ ಕ್ರಮವನ್ನು ಅನುಸರಿಸದೇ ಬಳಸಿದಾಗ.
  • ಕೀಟ ನಾಶಕ, ರೋಗನಾಶಕ , ಕಳೆನಾಶಕ ಇವುಗಳನ್ನು ತುಂಬಾ ಜಾಗರೂಕತೆಯಲ್ಲಿ ಹಾಂಡಲ್ ಮಾಡಬೇಕು. ಇಲ್ಲವಾದರೆ ತೊಂದರೆ.

weedicide sprayed garden

ಸುದ್ದಿಗಳು ಮತ್ತು ವಾಸ್ತವ:

  • ಕೆಲವು ಸ್ವಘೋಷಿತ ಪ್ರಗತಿಪರ ಕೃಷಿಕರು, ರಜಾಕಾಲದ ಕೃಷಿಕರಿಗೆ  ಸೆನ್ಸಿಟಿವ್ ಸುದ್ದಿಗಳು ಹೆಚ್ಚು ರಂಜನೀಯವಾಗುತ್ತದೆ.
  • ನೈಜ ಕೃಷಿಕನಿಗೆ ಕಳೆನಾಶಕ ಮತ್ತು ಕೀಟನಾಶಕ ಅನಿವಾರ್ಯವಾಗಿರುತ್ತದೆ.
  • ಅವನಿಗೆ ಕಳೆಗಳನ್ನು ಕೈಯಲ್ಲಿ ತೆಗೆಯಲು ಆಶೆ ಇದ್ದರೂ ಸಹ ಕೆಲಸಗಾರ ಸಮಸ್ಯೆ  ಹಾಗೀ ಇನ್ನಿತರ ಸಮಸ್ಯೆಗಳಿಗಾಗಿನಿರ್ವಾಹ ಇಲ್ಲದೆ ಕಳೆನಾಶಕದ ಮೊರೆ ಹೋಗುತ್ತಾರೆ.
  • ಹತ್ತಾರು ಬಾರಿ ಬೇಕೇ ಬೇಡವೇ ಎಂದು ದ್ವಂದ್ವಗಳೊಂದಿಗೆ ಇದನ್ನು ಮಾಡುತ್ತಾನೆ.
  • ಹಾಗೆಂದು ಇದು ಜಗತ್ತಿನಾದ್ಯಂತ ಬಳಕೆಯಲ್ಲಿರುವ ಪದ್ದತಿ.
  • ಆದುದರಿಂದ ಕಳೆನಾಶಕ ಬಳಸಿದ್ದರಲ್ಲಿ  ತಪ್ಪಿಲ್ಲ. ಆದರೆ ಅದನ್ನು ಸ್ವಲ್ಪ ಜಾಗರೂಕತೆಯಲ್ಲಿ ಬಳಸಿ.

ಎಲ್ಲವೂ ಒಂದೇ- ಹೆಸರು ಬೇರೆ:

  •  ರೌಂಡ್ ಅಪ್ ಇದು ಒಂದು ಕಳೆ ನಾಶಕದ ಬ್ರಾಂಡ್ ಅಷ್ಟೇ.
  • ಇದನ್ನು  ಮಾನ್ಸಂಟೋ ಎಂಬ ಅಮೇರಿಕಾ ಕಂಪೆನಿಯು ತಯಾರಿಸಿ ಮಾರಾಟ ಮಾಡುತ್ತದೆ.
  • ರೌಂಡ್ ಅಪ್ ಒಂದು ಕಳೆ ನಾಶಕದ ಬ್ರಾಂಡ್ ಅಷ್ಟೇ ಹೊರತಾಗಿ ಅದೇ ಒಂದು ಕಳೆ ನಾಶಕ ಅಲ್ಲ.
  • ಇದರಲ್ಲಿ ಇರುವ ಮೂಲವಸ್ತು  ಗ್ಲೈಪೋಸೆಟ್ 41 % ಇದು ಕಳೆಗಳನ್ನು ಕೊಲ್ಲುವ ಕೆಲಸವನ್ನು ಮಾಡುತ್ತದೆ.
  •   ಇದನ್ನು ಕೇವಲ ಮಾನ್ಸಂಟೋ ಕಂಪೆನಿ ಒಂದೇ ತಯಾರಿಸುವುದಲ್ಲ.
  • ಬೇರೆ ಬೇರೆ ಕಂಪೆನಿಗಳೂ ಬೇರೆ ಬೇರೆ  ಬೇರೆ ಬ್ರಾಂಡ್ ಹೆಸರಿನಲ್ಲಿ  ತಯಾರಿಸಿ ಮಾರಾಟ ಮಾಡುತ್ತವೆ.
  • ಅದರಲ್ಲೂ ಇರುವುದು ಗ್ಲೈಪೋಸೆಟ್ ಅಂಶ, ಇದರಲ್ಲೂ ಇರುವುದು ಗ್ಲೈಪೋಸೆಟ್.
  • ಹಾಗಿರುವಾಗ  ರೌಂಡ್ ಅಪ್ ಒಂದೇ ಬ್ರಾಂಡ್ ಮಾತ್ರ ಕ್ಯಾನ್ಸರ್ ಕಾರಕವಾಗುವುದಕ್ಕೆ ಸಾಧ್ಯವಿಲ್ಲ.
  • ಎಲ್ಲದರಲ್ಲೂ ಕ್ಯಾನ್ಸರ್ ಕಾರಕ ಅಂಶ( ಕಾರ್ಸೆನೋಜೆನಿಕ್) ಅಲ್ಪ ಸ್ವಲ್ಪ ಇರಬಹುದು.
  • ಅದಕ್ಕಾಗಿ ಸ್ವಲ್ಪ ಜಾಗರೂಕತೆಯಲ್ಲಿ ಬಳಕೆ ಮಾಡಿ.

ಕಳೆನಾಶಕಗಳಲ್ಲಿ ಕೆಲವು ದ್ರವ, ಕೆಲವು ತಯಾರಿಕೆಗಳು ಹುಡಿ, ಹರಳು, ಸಣ್ಣ ಕಡ್ಡಿ(ಶ್ಯಾವಿಗೆ) ಗಾತ್ರದಲ್ಲಿ  ಒದಗಿಸುತ್ತಾರೆ. ಕೆಲವು ಬೀಜಗಳನ್ನೂ ಕೊಲ್ಲುವವು ಇವೆ. ಕೆಲವಿ ನಿರ್ದಿಷ್ಟ ಕಳೆಗೆ ಮಾತ್ರ ಹೊಂದುವಂತದ್ದಿದೆ. ರೈತರು ಯಾವ ಕಳೆಗೆ ಯಾವುದು ಎಂಬುದನ್ನು ಅರಿತು ಬಳಕೆ ಮಾಡಬೇಕು.

  • ಕಳೆ ನಾಶಕಗಳು ಸುರಕ್ಷಿತವಂತೂ ಅಲ್ಲ. ತೀರಾ ವಿಷಕಾರಿ ಅಥವಾ ಹಾನಿಕಾರಕ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಹಾನಿಕರವೇ.
  • ಆದಕ್ಕಾಗಿ ಅದನ್ನು ಸುರಕ್ಷಿತ ಮುನ್ನೆಚ್ಚರಿಕೆ ವಹಿಸಿ ಸಿಂಪರಣೆ ಮಾಡಬೇಕು. ನಂತರ ನಿರ್ವಹಣೆಯನ್ನೂ ಮಾಡಬೇಕು.

ಸುರಕ್ಷಾ ಕ್ರಮ ಏನು:

spray  only where you require

  •  ಕಳೆನಾಶಕವನ್ನು ನೀರಿಗೆ  ಹಾಕುವಾಗ ಅದು ದ್ರವ ಆಗಿರಲಿ, ಪುಡಿ ಆಗಿರಲಿ ಅದಕ್ಕೆ  ಮೂಗು, ಕಣ್ಣು, ಬಾಯಿ ಸಂಪರ್ಕ ಆಗದಂತೆ ನೊಡಿಕೊಳ್ಳಿ. ಅದನ್ನು ಉಸಿರಾಟದೊಂದಿಗೆ ತೆಗೆದುಕೊಳ್ಳಬೇಡಿ.
  • ಮಿಶ್ರಣ ಮಾಡುವಾಗ ಕೈಯಿಂದ ಕಲಕಬೇಡಿ. ಸೂಕ್ತ ಕಲಕುವ ಸಾಧನವನ್ನು ಇಟ್ಟುಕೊಳ್ಳಿ. ಅದರ ಮೂಲಕ ಕಲಕಿರಿ.
  • ಮೈ ಕೈಗೆ ತಗಲದಂತೆ ಗ್ಲೌಸ್ ಹಾಕಿಕೊಳ್ಳಿ. ಸಿಂಪರಣೆ ಮಾಡುವಾಗ ಗಾಳಿಯ  ಸಂಚಾರಕ್ಕೆ  ವಿರುದ್ಧವಾಗಿ ಹೋಗಬೇಡಿ. ಅದು ಮೈ ಕೈಗೆ  ಬೀಳುತ್ತದೆ. ಕಾಲಿಗೆ  ತಗಲದಂತೆ ಬೂಟನ್ನು ಧರಿಸಬೇಕು.
  •  ಒಂದೊಂದೇ ಸಾಲಿನಲ್ಲಿ ಸಿಂಪಡಿಸುತ್ತಾ ಹಿಂದೆ ಹಿಂದೆ ಬರಬೇಕು. ಆಗ ಚರ್ಮಕ್ಕೆ ತಗಲಾರದು.
  •  ಸಿಂಪರಣೆಗೆ ಉತ್ತಮ ನಾಸಲ್ ಬಳಕೆ ಮಾಡಿ. ಕಡಿಮೆ ಸಾಂದ್ರತೆಯಲ್ಲಿ ಸಿಂಪಡಿಸುವ ಮೈಕ್ರಾನ್ ಸ್ಪ್ರೇಯರ್ ಆದರೆ ಒಳ್ಳೆಯದು.
  • ಕಳೆನಾಶಕ ತುಂಬಿದ ಸ್ಪ್ರೇಯರಿನ ಒಳ ಭಾಗವನ್ನು ಚೆನ್ನಾಗಿ ತೊಳೆದು ಒಂದೆರಡು ಬಾರಿ ಪ್ಲಶ್ ಮಾಡಿ ದ್ರಾವಣದ ಅಂಶ ಉಳಿಯದಂತೆ ನೊಡಿಕೊಳ್ಳಿ
  • ಗಾಯಗಳಿದ್ದರೆ ಅದಕ್ಕೆ ಕಳೆನಾಶಕ ಬೀಳದಿರಲಿ. ಅದನ್ನು ನೀರು ತಗಲದಂತೆ ಪ್ಯಾಕಿಂಗ್ ಮಾಡಿಕೊಳ್ಲಿ. ಗಾಯದ ಮೂಲಕ ಅದು ಒಳ ಸೇರಬಹುದು.
  • ತೇವಾಂಶ ಇರುವ ಸಮಯದಲ್ಲಿ ಸಿಂಪರಣೆ ಮಾಡಿ. ನೆಲ ಒಣಗಿದ್ದಾಗ ಸಿಂಪರಣೆ  ಮಾಡಿದರೆ  ಫಲ ಕಡಿಮೆ.
  •  ಸಿಂಪರಣೆ ಮಾಡಿ 3-6 ತಾಸು ನೀರು ಹಾಯಿಸಬಾರದು. ಮಳೆ ಬರಬಾರದು.
  • ದ್ರಾವಣದೊಂದಿಗೆ ಉಪ್ಪು ಅಥವಾ ಯೂರಿಯಾ ಅಥವಾ ಸಕ್ಕರೆಯನ್ನು ಸೇರಿಸಿದರೆ ಫಲಿತಾಂಶ ಉತ್ತಮವಾಗಿರುತ್ತದೆ.
  • ಉತ್ತಮ ಸ್ಪ್ರೆಡ್ಡರನ್ನು ಸೇರಿಸಿದರೆ  ಕಡಿಮೆ ಪ್ರಮಾಣದ ಕಳೆನಾಶಕ ಬಳಕೆ ಸಾಕಾಗುತ್ತದೆ.
  •  ಸಿಂಪರಣೆ ಮಾಡುವಾಗ ಚರ್ಮಕ್ಕೆ ತಗಲುವ ಸಂಭವ ಇದ್ದಲ್ಲಿ ಆಭಾಗಕ್ಕೆಲ್ಲಾ ತೆಂಗಿನೆಣ್ಣೆ ಸವರಿಕೊಂಡು ಸಿಂಪರಣೆ  ಮಾಡಿ.
  • ಕಳೆಗಳ  ಎಲೆಗಳ ಮೇಲೆ ಮಾತ್ರ ಬಿದ್ದರೆ ಸಾಕು. ನೆಲಕ್ಕೆ ಬೀಳುವುದು ಬೇಡ. ಸಾಧ್ಯವಾದಷ್ಟು ಕಡಿಮೆ ಬಳಸಿ.
  •  ಅಧಿಕ ಸಾಂದ್ರದಲ್ಲಿ (1 ಲೀ. ಕಳೆನಾಶಕ ಮತ್ತು 10 ಲೀ, ನೀರು) ಬೆರೆಸಿ ಸಿಂಪಡಿಸುವಾಗ ಬರೇ  ಎಲೆಗೆ ಸೂಕ್ಷ್ಮಾತಿ ಸೂಕ್ಷ್ಮ ಹನಿಗಳು ಬೀಳುವ ಕಾರಣ ಅದು ನೆಲೆಕ್ಕೆ ತಗಲಲಾರದು.

ಸೂಕ್ತ ಮುನ್ನೆಚ್ಚರಿಕೆ ವಹಿಸಿ ಯಾವುದೇ ರಾಸಾಯನಿಕ ಕೀಟನಾಶಕ , ರೋಗನಾಶಕ , ಕಳೆ ನಾಶಕ ಬಳಸುವುದು ನಮ್ಮ ಕರ್ತವ್ಯ. ಅದನ್ನು ಮಾಡದಿರುದು ಅನಾಹುತಗಳಿಗೆ ಕಾರಣ. ಹಲವು ಕೀಟನಾಶಕಗಳು ಕೆಟ್ಟ ಹೆಸರನ್ನು  ಗಳಿಸಿದ್ದೂ ಹೀಗೆ. ನಾವು ವಿವೇಚನೆಯಿಂದ ಬಳಕೆ ಮಾಡಿದರೆ ತೊಂದರೆ ಆಗದು.

Leave a Reply

Your email address will not be published. Required fields are marked *

error: Content is protected !!