ಗಂಧಕ- ಬೆಳೆಗಳಿಗೆ ಅಗತ್ಯವಾಗಿ ಬೇಕಾಗುವ ಪೋಷಕಾಂಶ.

ಎಲೆ ಹಳದಿಯಾಗುವುದಕ್ಕೆ ಒಂದು ಕಾರಣ ಗಂಧಕದ ಕೊರತೆ.Yellowing of leaves is one of sulphur deficiency symptom

ಬಹಳ ರೈತರು ತಮ್ಮ ಅಡಿಕೆ ಮರದ ಗರಿಗಳು ಹಳದಿಯಾಗಿವೆ, ಮರದ ಸುಳಿಗಳು ಸಣ್ಣದಾಗುತ್ತಿವೆ. ತೆಂಗಿನ  ಮರದಲ್ಲಿ ಕಾಯಿ ಆಗುತ್ತಿಲ್ಲ. ರಸ ಹೀರುವ ಕೀಟಗಳ ಸಮಸ್ಯೆ ಎಂದೆಲ್ಲಾ  ಹೇಳುತ್ತಾರೆ. ಇದಕ್ಕೆ ಒಂದದು ಕಾರಣ ಗಂಧಕ ಎಂಬ ಅಗತ್ಯ ಪೋಷಕದ ಕೊರತೆ.

 • ಬೆಳೆಗಳಲ್ಲಿ ಎಲೆಗಳು (Chlorosis)ಹಳದಿಯಾಗುವುದು, ಬೇರಿನ ಬೆಳವಣಿಗೆ ಕುಂಠಿತವಾಗುವುದು, ರೋಗ, ಕೀಟಗಳಿಗೆ ಬೇಗ ತುತ್ತಾಗುವುದು ಮುಂತಾದ ಕೆಲವು ಸಮಸ್ಯೆಗಳಿಗೆ  ಗಂಧಕದ ಕೊರತೆಯು ಒಂದು ಕಾರಣ.
 • ಪ್ರತೀಯೊಂದು ಬೆಳೆಯೂ ಗಂಧಕವನ್ನು  ಅಪೇಕ್ಷಿಸುತ್ತದೆ.

ರೈತರು ಸಲ್ಫೇಟ್ ರೂಪದ ಗೊಬ್ಬರವನ್ನು ಬೆಳೆಗಳಿಗೆ ಕೊಡುತ್ತಿದ್ದರೆ ಅದರಲ್ಲೇ ಗಂಧಕದ ಅಂಶ ಇರುವ ಕಾರಣ ಅದರ ಕೊರತೆ ಗೊತ್ತಾಗುವುದಿಲ್ಲ. ಯಾವುದರಲ್ಲೂ ಸಲ್ಫೇಟ್ ಅಂಶ ಇಲ್ಲದ ಪೋಷಕ  ಬಳಸುತ್ತಿದ್ದರೆ, ಗಂಧಕದ ಕೊರತೆ  ಉಂಟಾಗುತ್ತದೆ. ಗಂಧಕದ ಕೊರತೆ  ಸಸ್ಯ  ಬೆಳವಣಿಗೆಗೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ.

ಬಾಳೆಯಲ್ಲಿ ಗಂಧಕದ ಕೊರತೆಯ ಲಕ್ಷಣ-Sulpher deficiency symptoms in Banana
ಬಾಳೆಯಲ್ಲಿ ಗಂಧಕದ ಕೊರತೆಯ ಲಕ್ಷಣ
 • ಸಾಮಾನ್ಯವಾಗಿ ಹೆಚ್ಚಿನ ರೈತರು  NPK  ಗೊಬ್ಬರ ಹೊರತಾಗಿ ಬೇರೆ ಗೊಬ್ಬರಗಳನ್ನು ಬಳಕೆ ಮಾಡುವ ಪ್ರತೀತಿ ಇಲ್ಲ.
 • ಆದರೆ ವಸ್ತು ಸ್ಥಿತಿ ಬೇರೆಯೇ ಇರುತ್ತದೆ.
 • ಸುಣ್ಣವು ಬೆಳೆಗಳಿಗೆ  ಪೊಟ್ಯಾಶಿಯಂ ನಷ್ಟೇ ಅಗತ್ಯ.
 • ಗಂಧಕ ರಂಜಕದಷ್ಟೇ ಅಗತ್ಯ.
 • ಇವುಗಳು ಸಸ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ಬೇಕಾಗುವಂತದ್ದಾದರೂ ಅದು ತನ್ನದೇ ಆದ ಪಾತ್ರವನ್ನು ಹೊಂದಿದೆ.
 • ಇವುಗಳ ಕೊರತೆಯಾದರೆ ಸಸ್ಯ  ಆರೋಗ್ಯ ಹಾಳಾಗುತ್ತದೆ.
 • ಸಾರಜಕಕ, ರಂಜಕ ಪೊಟ್ಯಾಶ್ ಗಳು ಪ್ರಾಥಮಿಕ ಪೋಷಕಗಳಾದರೆ, ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕ ದ್ವಿತೀಯ ಪೋಷಕಗಳು.
 • ಮೊದಲಿನ ಮೂರು ಪೋಷಕಗಳ ಸಮರ್ಪಕ ಕೆಲಸಕ್ಕೆ ಈ ಮೂರು ಬೇಕೇ ಬೇಕು.
Avertisement 24
ADVERTISEMENT

ಕೇರಳದ ಕೃಷಿಕರು ಹಾಗೂ ಇನ್ನಿತರ ಕೆಲವು ಸೂಕ್ಷ್ಮವಾಗಿ ಗಮನಿಸಿದ ಕೃಷಿಕರು ಎರಡು ಆನೆ ಮಾರ್ಕಿನ ಗೊಬ್ಬರ ಸಿಗದಿದ್ದರೆ ಭಾರೀ ಗಲಾಟೆ ಮಾಡುತ್ತಾರೆ. ಕಾರಣ ಇಷ್ಟೇ ಈ ಗೊಬ್ಬರದಲ್ಲಿ ಅವರು ಉತ್ತಮ ಫಲಿತಾಂಶ ಗುರುತಿಸಿದ್ದಾರೆ. ಅದು ಮತ್ತೇನೂ ಅಲ್ಲ. ಗಂಧಕ. (ಈಗ ಈ ಗೊಬ್ಬರ ಬೇರೆ ಬ್ರಾಂಡ್ ನಲ್ಲೂ ಬಂದಿದೆ)  

ಭತ್ತದ ಬೆಳೆಯಲ್ಲಿ ಗಂಧಕದ ಕೊರತೆಯ ಲಕ್ಷಣ-Sulpher deficiency symptoms in paddy
ಭತ್ತದ ಬೆಳೆಯಲ್ಲಿ ಗಂಧಕದ ಕೊರತೆಯ ಲಕ್ಷಣ

ಬೆಳೆಗಳ ಮೇಲೆ ಗಂಧಕದ ಪರಿಣಾಮ:

 • ಸಸ್ಯಗಳ  ಕೋಶ  ವಿಭಜನೆ ಕ್ರಿಯೆಯಲ್ಲಿ ಗಂಧಕದ ಪಾತ್ರ ಇದೆ. ಸಸ್ಯಗಳ ತೀವ್ರ ಬೆಳವಣಿಗೆಗೆ ಗಂಧಕದ ಅಗತ್ಯ ತುಂಬಾ ಇರುತ್ತದೆ.
 • ಸಸ್ಯಗಳಲ್ಲಿ ಕಿಣ್ವಗಳು ಮತ್ತು ಸಸಾರಜನಕ ಕ್ರಿಯೆಗಳು ಸರಾಗವಾಗಿ ನಡೆಯುತ್ತಿರಲು ಗಂಧಕವು ಅಗತ್ಯ.
 • ಸಸ್ಯ ಬೇರಿನ ಬೆಳವಣಿಗೆಗೆ  ಕಾಯಿ ಕಚ್ಚಲು, ತಿರುಳು ಕೂಡಿಕೊಳ್ಳಲು  ತೂಕ ಬರಲು  ಸಸ್ಯ ಬೆಳವಣಿಗೆಯುದ್ದಕ್ಕೂ ಗಂಧಕವು ಬೇಕೇ ಬೇಕು.
 • ಸಸ್ಯಗಳಲ್ಲಿ ಎಲೆಗಳು ಹಚ್ಚ ಹಸುರಾಗಿರ ಬೇಕಾದರೆ ಅದನ್ನು ಬೆಂಬಲಿಸುವ ಪೋಷಕ ಗಂಧಕವಾಗಿರುತ್ತದೆ.
 • ಹೊಲದಲ್ಲಿ ಬೆಳೆಯುವ ಸಾರಜನಕ ಸ್ಥಿರೀಕರಣ ಮಾಡಬಲ್ಲ ದ್ವಿದಳ ಸಸ್ಯಗಳಲ್ಲಿ  ಬೇರು ಗಂಟುಗಳು ಉತ್ಪಾದನೆಯಾಗಲು ಗಂಧಕ ಬೇಕಾಗುತ್ತದೆ.

ಆಮ್ಲ ಮಣ್ಣುಗಳಲ್ಲಿ ಗಂಧಕದ ಬಳಕೆ ಬಗ್ಗೆ  ಜಾಗರೂಕತೆ ವಹಿಸಬೇಕು.  ಮಣ್ಣು ಪರೀಕ್ಷೆ  ಮಾಡಿಸಿ ಬಳಸುವುದು ಉತ್ತಮ.    ಕೆಲವೊಮ್ಮೆ ಗಂಧಕವು ಕಬ್ಬಿಣ , ಅಲ್ಯೂಮಿನಿಯಂ ಮತ್ತು ಮ್ಯಾಂಗನೀಸ್ ಜೊತೆಗೆ ಸೇರಿ ಸಲ್ಫೇಟ್  ಲವಣಗಳಾಗುತ್ತವೆ. ಇದರಿಂದ ಬೆಳೆಗಳಿಗೆ ತೊಂದರೆ ಉಂಟಾಗುತ್ತದೆ. 

ತೆಂಗಿನಲ್ಲಿ ಗಂಧಕದ ಕೊರತೆಯ ಲಕ್ಷಣ-Sulpher deficiency symptoms in coconut leaf
ತೆಂಗಿನಲ್ಲಿ ಗಂಧಕದ ಕೊರತೆಯ ಲಕ್ಷಣ

ಗಂಧಕ ಕೊರತೆಗೆ ಏನಾಗುತ್ತದೆ:

 • ಸಾವಯವ ವಸ್ತುಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡುವಲ್ಲಿ ಗಂಧಕದ  ಕೊರತೆ ಉಂಟಾಗುತ್ತದೆ.
 • ಅಂತಹ ಕಡೆ ಸಸ್ಯಗಳು ಗಿಡ್ಡವಾಗಿ ಬೆಳೆಯುತ್ತವೆ.
 • ಎಲೆಗಳು ಗಿಡ್ಡವಾಗುತ್ತದೆ. ಮುರುಟಿಕೊಳ್ಳುವುದೂ ಹೆಚ್ಚು.
 • ಮೈಟ್ ಮುಂತಾದ ರಸ ಹೀರುವ ಕೀಟಗಳ ಪ್ರಾಭಲ್ಯ ಹೆಚ್ಚಾಗುತ್ತದೆ.
 • ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ.  ಕೆಲವು ಸಸ್ಯಗಳಲ್ಲಿ ಎಲೆಗಳು ಕೆಂಪಾಗುವುದು( ಹತ್ತಿ) ಇದೆ.
 • ಬಹಳಷ್ಟು ಸಸ್ಯಗಳಲ್ಲಿ ಪತ್ರ ಹರಿತ್ತು ಕಡಿಮೆಯಾಗುವ ಕ್ಲೋರೋಸಿಸ್ ಉಂಟಾಗಲು ಗಂಧಕದ ಕೊರತೆಯೇ  ಕಾರಣ.  ಹಣ್ಣುಗಳ ಅಪಕ್ವ ಬೆಳವಣಿಗೆಗೆ,  ತೂಕ ನಷ್ಟಕ್ಕೆ ಗಂಧಕದ ಕೊರತೆಯ ಕಾರಣವಾಗಿದೆ.

ಯಾಕೆ  ಗಂಧಕದ ಕೊರೆತೆಯಾಗುತ್ತದೆ?

 • ಹಿಂದೆ ಅಮೋನಿಯಂ ಸಲ್ಫೇಟ್, ಸಿಂಗಲ್ ಸೂಪರ್ ಫೋಸ್ಫೇಟ್ ಮುಂತಾದ ಗೊಬ್ಬರಗಳನ್ನು ಬಳಕೆ  ಮಾಡುತ್ತಿದ್ದರು. ಆಗ ಗಂಧಕ ಕೊಡುವ ಪ್ರಶ್ನೆ  ಬರುತ್ತಿರಲಿಲ್ಲ. ಅದರಲ್ಲಿ ಗಂಧಕ ಇರುತ್ತದೆ.
 • ಇತ್ತೀಚೆಗೆ ಸಂಯುಕ್ತ ಗೊಬ್ಬರ ಅಥವಾ ಕೆಲವು ಗಂಧಕ ರಹಿತ ಗೊಬ್ಬರಗಳನ್ನು ಬಳಕೆ ಮಾಡುವುದು  ಪ್ರಾರಂಭವಾದ ಕಾರಣ  ಗಂಧಕ ಕೊರತೆ ಕಾಣಿಸುತ್ತದೆ.
 • ಹಿಂದೆ ಬಹುತೇಕ ರೋಗ, ಕೀಟಗಳಿಗೆ ಗಂಧಕ ಒಳಗೊಂಡ ಕೀಟನಾಶಕ ಬಳಕೆ ಮಾಡಲಾಗುತ್ತಿತ್ತು. (ವೆಟ್ಟೆಬಲ್ ಸಲ್ಫರ್) ಈಗ ಬಳಕೆಯಲ್ಲಿರುವ ಕೀಟ,ರೋಗ ನಾಶಕಗಳಲ್ಲಿ  ಇದು ಇಲ್ಲ.
 • ಸಾಮಾನ್ಯವಾಗಿ ಕಟ್ಟಿಗೆ,ಇತ್ಯಾದಿ ಸುಡುವಾಗ ಗಂಧಕವು  ಹೊಗೆಯ ರೂಪದಲ್ಲಿ ಲಭ್ಯವಾಗುತ್ತದೆ.
 • ಇತ್ತೀಚಿನ ದಿನಗಳಲ್ಲಿ ಕಟ್ಟಿಗೆ ಸುಡುವ ಬದಲು ಕಲ್ಲಿದ್ದಲು ಮತ್ತು ಇನ್ನಿತರ ಮೂಲವಸ್ತುಗಳನ್ನು ಸುಡಲಾಗುತ್ತಿದೆ.
 • ಇದು ಗಂಧಕದ ಕೊರತೆಯನ್ನು ಉಂಟು ಮಾಡುತ್ತದೆ.
ಹತ್ತಿಯಲ್ಲಿ ಗಂಧಕದ ಕೊರತೆ ಲಕ್ಷಣ-Sulpher deficiency in cotton
ಹತ್ತಿಯಲ್ಲಿ ಗಂಧಕದ ಕೊರತೆ ಲಕ್ಷಣ

ಸಸ್ಯಗಳು ಗಂಧಕವನ್ನು ಸಲ್ಫೇಟ್ ಅಯಾನು ರೂಪದಲ್ಲಿ ಹೀರಿಕೊಳ್ಳುತ್ತವೆ. ಹಿಂದೆ ಈ ಪೋಷಕದ ಕೊರತೆ ಕಂಡು ಬರುತ್ತಿರಲಿಲ್ಲ. ಕಾರಣ ಇಷ್ಟೇ ಸಾಕಷ್ಟು  ಸಾವಯವ / ಹಸುರೆಲೆ ಗೊಬ್ಬರಗಳನ್ನು ಬಳಕೆ ಮಾಡಲಾಗುತ್ತಿತ್ತು.ಮಳೆ ಬಂದಾಗ ನೆಲದ ಮೇಲಿನ ಸಾವಯವ ವಸ್ತುಗಳು ತೇವಾಂಶದಿಂದ ಕರಗಲ್ಪಟ್ಟು  ಗಂಧಕ ನೈಸರ್ಗಿಕವಾಗಿ ಲಭ್ಯವಾಗುತ್ತದೆ. ಅವು ಒಣಗಿದ ಸ್ಥಿತಿಯಲ್ಲಿ ಕಡಿಮೆಯಾಗುತ್ತವೆ. ಇದು ನೀರಿನಲ್ಲಿ ಕರಗಿ ತೊಳೆದು ನಷ್ಟವಾಗುವ ಪೋಷಕ.

 • ಅಧಿಕ ಇಳುವರಿ ಪಡೆಯುವಾಗ ಸಹಜವಾಗಿ ಗಂಧಕದ ಕೊರತೆ ಕಂಡು ಬರುತ್ತದೆ.
 • ಸಸ್ಯಗಳು ಎಷ್ಟು ಬಳಕೆ ಮಾಡುತ್ತವೆಯೋ ಅಷ್ಟು ಮಣ್ಣಿನಲ್ಲಿ ಕೊರತೆ ಉಂಟಾಗುತ್ತದೆ.
ಶೇಂಗಾ ಬೆಳೆಯಲ್ಲಿ ಗಂಧಕದ ಕೊರತೆ ಲಕ್ಷಣ-Sulpher deficiency in ground nut
ಶೇಂಗಾ ಬೆಳೆಯಲ್ಲಿ ಗಂಧಕದ ಕೊರತೆ ಲಕ್ಷಣ

ಎಷ್ಟು ಗಂಧಕ ಬಳಸಬೇಕು:

 • ರೈತರು ಮೆಗ್ನೀಶಿಯಂ ಸಲ್ಫೇಟ್, ಪೊಟ್ಯಾಶಿಯಂ ಸಲ್ಫೇಟ್, ಕಾಪರ್ ಸಲ್ಫೇಟ್,  ಝಿಂಕ್ ಸಲ್ಪೇ ಟ್ , ಜಿಪ್ಸಮ್, ಅಮೋನಿಯಂ ಸಲ್ಫೇಟ್   ಗೊಬ್ಬರಗಳನ್ನು  ಹಾಗೆಯೇ 20:20:0:13  ಮುಂತಾದ ಬಳಸುವಾಗ  ಪ್ರತ್ಯೇಕವಾಗಿ ಗಂಧಕ ಗೊಬ್ಬರವನ್ನು ಬಳಸಬೇಕಾಗಿಲ್ಲ.
 •  ಎಕ್ರೆಗೆ ಗರಿಷ್ಟ 40-60 ಕಿಲೋ ಗಂಧಕ ಸಾಕು. ಇದನ್ನು ಮಣ್ಣಿಗೆ ಎಲ್ಲಾ ಕಡೆಗೂ  ಹರಡುವಂತೆ ಹಾಕಬೇಕು.
 •  ತಮ್ಮ ಹೊಲದಲ್ಲಿ ಒಂದು ಭಾಗದ ಬೆಳೆಗೆ ಗಂಧಕ ಕೊಟ್ಟು ಇಳುವರಿ, ಮರದ ಲಕ್ಷಣ ಬದಲಾದುದು ಗೋಚರವಾದರೆ ಅಲ್ಲಿ ಗಂಧಕದ ಕೊರತೆ ಇದೆ ಎಂದು ತಿಳಿಯಬಹುದು.
 • ಗಂಧಕದ ಕೊರತೆ ನೀಗಿಸಲು ಪತ್ರ ಸಿಂಚನದ ಮೂಲಕ ಗಂಧಕ ಉಳ್ಳ ಪೋಷಕ ಕೊಟ್ಟರೂ ಸಾಕಾಗುತ್ತದೆ.

ಗಂಧಕದ ಬಗ್ಗೆ ಈ ತನಕ ನಾವು  ತಲೆಕೆಡಿಸಿಕೊಂಡವರಲ್ಲ. ಆದರೆ ಅದು ಪ್ರಾಕೃತಿಕವಾಗಿ ಲಭ್ಯವಾಗುತ್ತಿತ್ತು.ಈಗ ಅದರ ಲಭ್ಯತೆ ಕಡಿಮೆಯಾದ ಕಾರಣ ಬೆಳೆಗಳಲ್ಲಿ  ಹರಿತ್ತು ಕಡಿಮೆಯಾಗುವುದು, ರಸ ಹೀರುವ ಕೀಟ ಹೆಚ್ಚಾಗುವುದು ಕಂಡು ಬರುತ್ತಿದೆ. ಇದನ್ನೆಲ್ಲಾ ಸರಳವಾಗಿ ನಿಯಂತ್ರಿಸಲು  ಗಂಧಕ ಅಥವಾ ಗಂಧಕ ಯುಕ್ತ  ಗೊಬ್ಬರದ ಬಳಕೆ ಅಗತ್ಯವಾಗಿದೆ.
End of the article:———————————————-
search words:  sulphur  nutrient# plant health# nutrient and plant health# mites control# chlorosis # photosynthesis# yellow leaf#

Leave a Reply

Your email address will not be published. Required fields are marked *

error: Content is protected !!