ಗೋಡಂಬಿ ಅಥವಾ ಗೇರು ಒಣ ಭೂಮಿಯಲ್ಲಿ ಬೆಳೆಯಬಹುದಾದ ಲಾಭದಾಯಕ ಬೆಳೆ. ಇದರ ಪ್ರಮುಖ ಸಮಸ್ಯೆ ಎಂದರೆ ಟಿ- ಸೊಳ್ಳೆ. ಇದರ ನಿಯಂತ್ರಣಕ್ಕೆ ಈ ತನಕ ವಿಷ ರಾಸಾಯನಿಕ ಸಿಂಪರಣೆಯನ್ನು ಶಿಫಾರಸು ಮಾಡಲಾಗುತ್ತಿದ್ದರೆ ಈಗ ಸುರಕ್ಷಿತ ವಿಷ ರಹಿತ ಪರಿಹಾರ ಫಲಿತಾಂಶ ಕೊಟ್ಟಿದೆ. ಇನ್ನು “ಟಿ” ಸೊಳ್ಳೆ ನಿಯಂತ್ರಣಕ್ಕೆ ಸಿಕ್ಕ ಸಿಕ್ಕ ವಿಷ ಕೀಟ ನಾಶಕ ಬಳಸಬೇಕಾಗಿಲ್ಲ.
- “ಟಿ” ಸೊಳ್ಳೆಯಿಂದ ಗೋಡಂಬಿ ಬೆಳೆಯಲ್ಲಿ ಸುಮಾರು 50% ಕ್ಕೂ ಹೆಚ್ಚಿನ ಫಸಲು ನಷ್ಟವಾಗುತ್ತದೆ.
- ಗೇರು ಸಸಿಗಳು ಚಿಗುರುವ ಸಮಯದಿಂದ ಪ್ರಾರಂಭವಾಗಿ ಕೊಯಿಲು ಮುಗಿಯುವ ತನಕ ಈ ಕೀಟದ ಸಮಸ್ಯೆ ಇದೆ.
- ಪ್ರಾರಂಭದಲ್ಲಿ ಚಿಗುರು ಮೊಗ್ಗಿನ ರಸ ಹೀರುತ್ತದೆ.
- ಆ ನಂತರ ಹೂ ಮೊಗ್ಗು ಬರುವಾಗ ಅದರ ಚಿಗುರಿನ ರಸ ಹೀರುತ್ತದೆ. ನಂತರ ಎಳೆಯ ಮಿಡಿಗಳ ರಸ ಹೀರುತ್ತದೆ.
ಏನಿದು “ಟಿ” ಸೊಳ್ಳೆ:
- ಇದು ಚಹ ತೋಟದ ಪ್ರಮುಖ ರಸ ಹೀರುವ ಒಂದು ಸೊಳ್ಳೆ ಜಾತಿಯ ಕೀಟ. ಬರೇ ಚಹ ಚಿಗುರು ಮಾತ್ರವಲ್ಲ, ಬೇರೆ ಬೇರೆ ಸಸ್ಯಗಳ ಚಿಗುರು ಕಾಯಿಗಳ ರಸ ಹೀರುತ್ತದೆ.
- ಈ ಸೊಳ್ಳೆ ನಮ್ಮ ಸುತ್ತಮುತ್ತ ಇರುವ ಸೊಳ್ಳೆಯ ತರಹವೇ ಇದ್ದು, ಸ್ವಲ್ಪ ದೊಡ್ಡದಿರುತ್ತದೆ. ಬಣ್ಣ ಭಿನ್ನವಾಗಿದ್ದು,ಕಣ್ಣಿಗೆ ಕಾಣಿಸುತ್ತದೆ.
- ಇದು ವಾತಾವರಣದಲ್ಲೇ ಇರುತ್ತದೆ. ಗೇರು,ಮಾವು, ಕೊಕ್ಕೋ ಸೇರಿದಂತೆ ಬೇರೆ ಬೇರೆ ಹಣ್ಣಿನ ಗಿಡ ಮರಗಳಿಗೆ ತೊಂದರೆ ಮಾಡುತ್ತದೆ.
- ರಸ ಹೀರುವ ಕೀಟವಾಗಿದ್ದು, ಸಸ್ಯಗಳ ಎಳೆ ಭಾಗದಿಂದ ರಸ ಹೀರಿ ಅದನ್ನು ಒಣಗುವಂತೆ ಮಾಡುತ್ತದೆ.
ನಿಯಂತ್ರಣೋಪಾಯ:
- ಟಿ- ಸೊಳ್ಳೆ ಯನ್ನು ಸಮಯಾದಾರಿತವಾಗಿ ಕೀಟ ನಾಶಕ ಸಿಂಪರಣೆ ಮಾಡಿ ನಿಯಂತ್ರಣ ಮಾಡಲಾಗುತ್ತಿತ್ತು.
- ವಾಣಿಜ್ಯಿಕ ಬೆಳೆ ಬೆಳೆಸುವವರು ಈಗಲೂ ಇದೇ ವಿಧಾನವನ್ನು ಅನುಸರಿಸುತ್ತಿದ್ದಾರೆ.
- ಎಲೆ ಉದುರಿ ಹೊಸ ಚಿಗುರು ಮೊಗ್ಗು ಬರುವ ಸಮಯ, ಚಿಗುರು ಬೆಳವಣಿಗೆ ಆಗುವ ಸಮಯ ಮತ್ತು ಮಿಡಿ ಆಗುವ ಸಮಯದಲ್ಲಿ ಕನಿಷ್ಟ ಮೂರು ಬಾರಿ ಸಿಂಪರಣೆ ಮಾಡಬೇಕಾಗುತ್ತದೆ.
- ಟಿ- ಸೊಳ್ಳೆ ಕಾಟ ಇಲ್ಲ ಎಂದು ಹೇಳಲಿಕ್ಕೆ ಬರುವುದಿಲ್ಲ. ಕೆಲವು ಸಮಯದಲ್ಲಿ ಕಡಿಮೆ, ಕೆಲವು ಪ್ರದೇಶದಲ್ಲಿ ಕಡಿಮೆ, ಕೆಲವೆದೆ ಹೆಚ್ಚು ಇರುತ್ತದೆ.
- ಹೆಚ್ಚು ಇದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟಾಗುತ್ತದೆ.
ಸುರಕ್ಷಿತ ನಿವಾರಣೋಪಾಯ:
- ಗೋಡಂಬಿ ಮರಗಳಿಗೆ ಟಿ-ಸೊಳ್ಳೆ ನಿಯಂತ್ರಣಕ್ಕೆ ವಿಷ ಕೀಟ ನಾಶಕಗಳನ್ನು ಬಳಕೆ ಮಾಡುವುದರ ಬಗ್ಗೆ ರೈತರಲ್ಲಿ ಸಾಕಷ್ಟು ಅಸಮಾಧಾನಗಳಿವೆ.
- ಸಣ್ಣ ಸಣ್ಣ ಬೆಳೆಗಾರರಿಗೆ ಸಿಂಪರಣೆ ಮಾಡುವರೇ ಸೂಕ್ತ ಸಿಂಪರಣಾ ಸಾಧನಗಳೂ ಇಲ್ಲದೆ ತೊಂದರೆಯಾಗುತ್ತದೆ. ಕೆಲವು ಅಸುರಕ್ಷಿತ ವಿಧಾನಗಳ ಮೂಲಕ ಸಿಂಪರಣೆ ಮಾಡಿ ಬಳಸಿದರವರ ಆರೋಗ್ಯಕ್ಕೂ ತೊಂದರೆ ಉಂಟಾಗುತ್ತದೆ.
- ಇದರ ಬದಲಿಗೆ ಈಗ ಗೇರು ತೋಟಗಳಲ್ಲಿ ಒಂದು ಅಂಟು ಕಾಗದವನ್ನು ನೇತಾಡಿಸುವ ವಿಧಾನವನ್ನು ಪರಿಚಯಿಸಿ ಅದರಲ್ಲಿ ಫಲಿತಾಂಶ ಕಾಣಲಾಗಿದೆ.
- ಸ್ಟಿಕ್ಕೀ (Sticky Trap) ಟ್ರಾಪ್ ಎಂಬ ಈ ವ್ಯವಸ್ಥೆಯನ್ನು ಮಾಡಿಕೊಂಡರೆ ಯಾರಿಗೂ ಯಾವ ಹಾನಿಯೂ ಇಲ್ಲ.
- ಇದು ಅಂಟು ಲೇಪಿತ ಹಾಳೆಯಾಗಿದ್ದು, ಇದನ್ನು ಗೇರು ಮರದ ಸಮೀಪ ನೇತಾಡಿಸಿ ಇಟ್ಟರೆ, ಹಾರುವಾಗ ಇದಕ್ಕೆ ಅಂಟಿ ಕೊಂಡು ಅಲ್ಲೇ ಸೊಳ್ಳೆ ಸತ್ತು ಹೋಗುತ್ತದೆ.
- ಈ ಹಾಳೆಗಳು ಅಂಟು ಲೇಪಿತವಾಗಿಯೂ, ಅಲ್ಲದೇ ಅಂಟು – ಮತ್ತು ಹಾಳೆ ಪ್ರತ್ಯೇಕ ಪ್ರತ್ಯೇಕವಾಗಿಯೂ ಲಭ್ಯ.
- ಹಳದಿ, ನೀಲಿ, ಮತ್ತು ಬಿಳಿ ಬಣ್ಣದ ಹಾಳೆಗಳು ಹೆಚ್ಚಿನ ಪ್ರಮಾಣದಲ್ಲಿ ಸೊಳ್ಳೆಗಳನ್ನು ಆಕರ್ಷಿಸುತ್ತವೆ.
- ಗೋಡಂಬಿ ಬೆಳೆಗಾರರು ಮಾರುಕಟ್ಟೆಯಿಂದ ಅಂಟು ಮತ್ತು ಹಾಳೆಯನ್ನು ಪ್ರತೇಕವಾಗಿ ತಂದು ಇಡುವುದು ಸೂಕ್ತ.
- ಒಂದು ಎಕ್ರೆ ಹೊಲಕ್ಕೆ ಸುಮಾರು 20 ಕ್ಕೂ ಹೆಚ್ಚು ಟ್ರಾಪುಗಳನ್ನು ನೇತಾಡಿಸಿದರೆ ಪ್ರತೀ ದಿನ ನೂರಕ್ಕೂ ಹೆಚ್ಚು ಸೊಳ್ಳೆಗಳು ಇದರಲ್ಲಿ ಬಂಧಿಯಾಗುತ್ತವೆ.
- ಹೆಚ್ಚಿನವು ಗಂಡು ಸೊಳ್ಳೆಗಳೇ ಆಗಿದ್ದು, ಅವು ಸತ್ತೆರೆ ಹೆಣ್ಣು ಸೊಳ್ಳೆಗಳ ಸಂತಾನಾಭಿವೃದ್ದಿ ಕಡಿಮೆಯಾಗುತ್ತದೆ.
ವಿಷ ರಾಸಾಯನಿಕಗಳನ್ನು ಅಸುರಕ್ಷಿತ ವಿಧಾನದಲ್ಲಿ ಸಿಂಪರಣೆ ಮಾಡುವುದು ಅಪಾಯ. ಅದರ ಬದಲಿಗೆ ಇದನ್ನು ಅನುಸರಿಸಿದರೆ ಯಾರಿಗೂ ಯಾವ ತೊಂದರೆಯೂ ಇಲ್ಲ.