ಕಳೆ ಹೆಚ್ಚು ಇದ್ದಲ್ಲಿ ಬೆಳೆ ತುಂಬಾ ಕಡಿಮೆ.

by | May 8, 2020 | Arecanut (ಆಡಿಕೆ), Irrigation (ನೀರಾವರಿ) | 0 comments

ಬಹಳ ಜನ ಬೆಳೆಗಳಿಗೆ ನೀರು ಕೊಟ್ಟಷ್ಟೂ ಒಳ್ಳೆಯದು ಎಂಬು ಭಾವಿಸುತ್ತಾರೆ. ಮಳೆಗಾಲದ ಮಳೆಗೆ ನೆಲ ಮತ್ತು ಸಸ್ಯಗಳು ಹೇಗೆ ಇರುತ್ತವೆಯೋ ಅದೇ  ರೀತಿ ಬೇಸಿಗೆಯಲ್ಲಿಯೂ ಇರುವಂತೆ ನೋಡಿಕೊಳ್ಳುತ್ತಾರೆ.  ನಮ್ಮ ಈ ವಿಧಾನದಿಂದಾಗಿ ಭೂಮಿಯಲ್ಲಿ ವರ್ಷದಿಂದ ವರ್ಷಕ್ಕೆ ಫಲವತ್ತತೆ ಕ್ಷೀಣಿಸುತ್ತದೆ. ಇಳುವರಿಯೂ ಕಡಿಮೆಯಾಗುತ್ತದೆ.

Arecanut yield

ಇದು ನಮ್ಮೆಲ್ಲರ ಸಮಸ್ಯೆ:

  • ಸಾಮಾನ್ಯವಾಗಿ ನಿರಂತರ 3-4  ವರ್ಷ ಗೊಬ್ಬರ  ಕೊಡುತ್ತಿದ್ದರೆ , ಒಂದು ವರ್ಷ ಏನೂ ಗೊಬ್ಬರ ಕೊಡದಿದ್ದರೂ ಬೆಳೆಯಲ್ಲಿ ಇಳುವರಿ ಕಡಿಮೆಯಾಗಬಾರದು.
  • ಆದರೆ ಆಗುತ್ತದೆ. ಕಾರಣ ನಾವು ವರ್ಷ ವರ್ಷ ಕೊಡುವ ಗೊಬ್ಬರಗಳ ದುರ್ವ್ಯಯ ಆಗುತ್ತದೆ.
  • ಬಹಳಷ್ಟು ಬೆಳೆಗಾರರ ಅಡಿಕೆ ತೋಟದಲ್ಲಿ ಬೇಸಿಗೆಯ ಕಾಲದಲ್ಲಿ ಸಾಕಷ್ಟು ಹುಲ್ಲು ಬೆಳೆದದ್ದು ಹಚ್ಚ ಹಸುರಾಗಿ ಕಾಣುತ್ತದೆ.
  • ಮಳೆಗಾಲ ಸಮೀಪಿಸುತ್ತಿದ್ದಂತೆ  ಕಾಲು ಗಂಟು ತನಕವೂ ಹುಲ್ಲು ಇತ್ಯಾದಿ ಕಳೆಗಳಿರುತ್ತವೆ.
  • ಕೆಳ ಭಾಗದಲ್ಲಿ ನೋಡಿದರೆ ಹಚ್ಚ ಹಸುರು, ಮೇಲೆ ಮರ ನೋಡಿದರೂ ಹಚ್ಚ  ಹಸುರು.
  • ಆದರೆ ಫಸಲು ಮಾತ್ರ ಕಡಿಮೆ. ಇದಕ್ಕೆ ಕಾರಣ ಮತ್ತೇನೂ ಅಲ್ಲ. ಅಧಿಕ ನೀರಾವರಿ.

ಪ್ರಕೃತಿ ಒಂದು ಪಾಠ:

  • ಬೆಳೆ ಬೆಳೆಯುವವರು ಒಮ್ಮೆ ನಮ್ಮ ವಾತಾವರಣವನ್ನು ಗಮನಿಸಬೇಕು.
  • ಅಲ್ಲಿ ಹೇಗೆ ಸಸ್ಯಗಳು ಬದುಕುತ್ತವೆ, ವಾತಾವರಣ ಬದಲಾದಂತೆ ಹೇಗೆ ಸಸ್ಯಗಳ ಬೆಳವಣಿಗೆ ಲಕ್ಷಣಗಳು ಬದಲಾಗುತ್ತವೆ ಎಂಬುದನ್ನು ಗಮನಿಸಬೇಕು.

ಬೆಳೆಗಳಿಗೆ ಪೋಷಕಗಳನ್ನು ಕೊಡುವುದು ಮಣ್ಣಿನಲ್ಲಿ ಅದರ ಕೊರತೆ ಆದಾಗ. ಮಣ್ಣು ತನ್ನ ಮೇಲ್ಮೈಯಲ್ಲಿ ಬೆಳೆಯುವ ಸಸ್ಯಕ್ಕೆ ಬೇಕಾದ ಪೋಷಕವನ್ನು ಒದಗಿಸಲು ಸಮರ್ಥವಾಗಿರುತ್ತದೆ. ಬಹುತೇಕ ಬೆಳೆ ಪೋಷಕಗಳು ಮಣ್ಣಿನಲ್ಲಿ ಇದ್ದೇ ಇರುತ್ತವೆ. ಅದನ್ನು ಹೀಗೆ ಗಮನಿಸಬಹುದು.

  • ಸ್ವಲ್ಪ ಜಲಮಟ್ಟ ಮೇಲೆ ಇರುವಲ್ಲಿ ಉನ್ನತ ಸ್ಥರದ ಸಸ್ಯಗಳೂ, ಹಾಗೆಯೇ ನೀರಿನ ಲಭ್ಯತೆ ಇಲ್ಲದಿದ್ದಲ್ಲಿ ಕುರುಚಲು ಹುಲ್ಲು ಕಡ್ಡಿಗಳು  ಇರುತ್ತವೆ.
  • ಭೂಮಿ ಯಾವುದನ್ನೂ ಸಾಯಲು ಬಿಡುವುದಿಲ್ಲ. ಹುಲ್ಲು / ಕುರುಚಲು ಸಸ್ಯ ಮೇಲೆ ಪೂರ್ತಿ ಒಣಗಿದ್ದರೂ ಅದರ ಬುಡ ಜೀವಂತ ಇರುವಂತೆ  ರಕ್ಷಿಸುತ್ತದೆ.
  • ಇದು  ಮಣ್ಣು ತನ್ನ ಮೇಲಿರುವ ಸಸ್ಯ ವೈವಿಧ್ಯಗಳನ್ನು ರಕ್ಷಿಸುವ  ವಿಧಾನ.
  • ಇದು ಬೆಳೆಗಳಿಗೂ ಹೊರತಲ್ಲ. ಬೆಳೆಗಳಿಗೆ ನಾವು ಪೋಷಕ, ನೀರು ಕೊಡುವುದು ಅದರಿಂದ ಅಧಿಕ ಇಳುವರಿ ಪಡೆಯಲು.

ಹಸುವಿನಿಂದ ಹಾಲು ಹೆಚ್ಚು ಪಡೆಯಲು ತಿನಿಸು ಕೊಟ್ಟಂತೆ. ಒಂದು ವೇಳೆ ಸೂಕ್ತ ಭೂಮಿಯಲ್ಲಿ ಬೆಳೆ ಬೆಳೆಸಿ ಏನನ್ನೂ ಕೊಡದಿದ್ದರೂ ಸಹ ಅದರಲ್ಲಿ ಅಲ್ಪ ಸ್ವಲ್ಪ ಇಳುವರಿ ಬಂದೇ ಬರುತ್ತದೆ.

  • ಪ್ರಕೃತಿಯ ವ್ಯವಸ್ಥೆಗೆ ನಮ್ಮ  ಕೆಲವು ಮಾರ್ಪಾಟುಗಳೇ ನೀರಾವರಿ, ಗೊಬ್ಬರ, ಉಳುಮೆ, ಇತ್ಯಾದಿ.
  • ಇದನ್ನು ಹಿತ ಮಿತವಾಗಿ ಪ್ರಕೃತಿಗೆ ಪೂರಕವಾಗಿ ಮಾಡಿದರೆ ತೊಂದರೆ ಇಲ್ಲ. ಅದಕ್ಕೆ ವಿರುದ್ಧವಾಗಿ ಮಾಡಿದರೆ ಬೇರೆ  ತೊಂದರೆಗಳು ಉಂಟಾಗುತ್ತವೆ.

ನೀರು ಹೆಚ್ಚಾದರೆ ಮಾತ್ರ  ಕಳೆ:

  • ಅಧಿಕ ನೀರನ್ನು ಬೆಳೆಗಳಿಗೆ ಕೊಡುವುದರಿಂದ ತಕ್ಷಣಕ್ಕೆ ಆಗುವ ಪರಿಣಾಮ, ಮಣ್ಣಿನಲ್ಲಿ  ಕಳೆ ಸಸ್ಯಗಳ  ಬೆಳವಣಿಗೆ.
  • ಎರಡನೇ ಪರಿಣಾಮ ಬೆಳೆಗಳಿಗೆ ಲಭ್ಯವಾಗುವ ಪೋಷಕಾಂಶ ಕಡಿಮೆಯಾಗುವುದು.
  • ಮೂರನೇ ಪರಿಣಾಮ ಬೆಳೆಗಳಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಗೊಬ್ಬರ ಕೊಡಬೇಕಾಗುವುದು  ಹಾಗೆಯೇ  ಇಳುವರಿಯೂ ಕಡಿಮೆಯಾಗುವುದು.
  • ಕಳೆಗಳು  ಹೆಚ್ಚು ಬೆಳೆದರೆ ಅವುಗಳು ನಾವು ಕೊಡುವ ಪೋಷಕಗಳನ್ನು ಮೊದಲಾಗಿ  ಬಳಸಿಕೊಳ್ಳುತ್ತದೆ.
  • ಬೆಳೆಗಳು ಪೋಷಕಗಳನ್ನು ತಮ್ಮ ಅಂಗಾಂಶಗಳಿಗೆ ಬಳಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ.
  • ಆದರೆ ಕಳೆಯಂತಹ ಕೆಳಸ್ಥರದ ಸಸ್ಯಗಳು ಅದನ್ನು ಬೇಗ  ಬಳಸಿಕೊಳ್ಳುತ್ತವೆ.

ಕಳೆಗಳು ನೆಲದಲ್ಲಿ ಹೆಚ್ಚು ಹೆಚ್ಚು ಬೆಳೆದಾಗ ಮಣ್ಣಿಗೆ ಸೂರ್ಯನ ಬೆಳಕು ನೇರವಾಗಿ ಬೀಳುವುದು  ತಪ್ಪುತ್ತದೆ. ಹೀಗೆ ಆದಾಗ  ಕೆಲವು ವಾತಾವರಣದಿಂದ ದೊರೆಯಬೇಕಾದ ಪೋಷಕಗಳು ದೊರೆಯದೆ ಮಣ್ಣಿನಲ್ಲಿ ಅದರ ಕೊರತೆ ಉಂಟಾಗುತ್ತದೆ. ಇದು ಆಂತಹ ದೊಡ್ಡ ನಷ್ಟ ಅಲ್ಲ.

  • ಕಳೆ ಹೆಚ್ಚು ಇದ್ದಷ್ಟೂ ಹೊಲದ ರಚನೆ ಉತ್ತಮವಾಗುತ್ತದೆ ಎನ್ನುತ್ತಾರೆ. ಅದು ತಪ್ಪು.
  • ಕಳೆಗಳು ಮಣ್ಣನ್ನು ನೈಸರ್ಗಿಕವಾಗಿ ಪುನಶ್ಚೇತನಗೊಳ್ಳಲು ಬಿಡುವುದಿಲ್ಲ.

ನಾವು ತಿಳಿದಿರಬೇಕಾದ ಸಂಗತಿ:

  • ನಿಸರ್ಗದಲ್ಲಿ  ಕಾಲಮಾನದ ಬದಲಾವಣೆ ಒಂದು ಸಮತೋಲನದ ವ್ಯವಸ್ಥೆ.  ಇದು ಸಕಲ ಜೀವ ರಾಶಿಗಳ ಮೇಲೂ ಒಂದಿಲ್ಲೊಂದು ಪರಿಣಾಮ ಬೀರುವಂತದ್ದು.
  • ಮಳೆಗಾಲದಲ್ಲಿ ಮಳೆ ಬಂದು ಧರೆ ತಂಪಾಗುತ್ತದೆ. ಕಳೆ ಬೀಜಗಳೆಲ್ಲಾ ಹುಟ್ಟಿಕೊಳ್ಳುತ್ತವೆ.
  • ಚಳಿಗಾಲ ಬಂದಾಗ ಹೂ ಬಿಟ್ಟು ಬೀಜ ಉದುರಿಸಿ ಅವು ಸಾಯುತ್ತವೆ. ಅಥವಾ ಸುಪ್ತವಾಗಿ ಕಾಣದಂತೆ ಇರುತ್ತವೆ.
  • ಮತ್ತೆ ಮಳೆ ಬರುವ ತನಕವೂ ಅದೇ ಸ್ಥಿತಿ. ಮಳೆ ಬಂದ ತಕ್ಷಣ ಹಿಂದಿಗಿಂತ ಹೆಚ್ಚು ಸಧೃಢವಾಗಿ ಸಸ್ಯಗಳು ಬೆಳೆಯುತ್ತವೆ.
  • ಇದು ಒಂದು ಚಕ್ರ.
  • ನಾವು ಬೇಸಾಯ ಮಾಡುವಾಗ ಈ ಕಾಲಮಾನದ ಕ್ರಮಕ್ಕೆ ಅನುಗುಣವಾಗಿಯೇ ಸಸ್ಯಗಳಿಗೆ ಅದರ ಪರಿಣಾಮವನ್ನು ಗೊತ್ತಾಗುವಂತೆ ಮಾಡಬೇಕು.
  • ಚಳಿಗಾಲ ಎಲ್ಲಾ ಸಸ್ಯ ವರ್ಗಗಳಿಗೂ ವಿರಾಮ, ಬೇಸಿಗೆ ಕಾಲ ಚಟುವಟಿಕೆಯ ಕಾಲ.
  • ಮಳೆಗಾಲ ನೆಲದ ಕೆಲವು ಬೇಡದ ವಸ್ತುಗಳನ್ನು ( Toxic elements)  ಕಳೆದುಕೊಂಡು ಮತ್ತೆ ಹೊಸ ಚೈತನ್ಯಕ್ಕೆ  ಬರುವ ಕಾಲ.

ನಾವು ಅಧಿಕ ನೀರಾವರಿ ಮಾಡುವುದರಿಂದ  ಬೆಳೆಗಳಿಗೆ ಕಾಲಮಾನದ ಬದಲಾವಣೆಯ ಸಂಗತಿಯೇ ಅರಿವಿಗೆ ಬಾರದೆ  ಕೆಲವು ಅಸಮತೋಲನಗಳು ಉಂಟಾಗುತ್ತವೆ.ಮುಖ್ಯವಾಗಿ ಮಣ್ಣು ಸತ್ವ ಕಳೆದುಕೊಂಡು, ಇಳುವರಿ ಸ್ವಲ್ಪ ಸ್ವಲ್ಪವೇ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಬೆಳೆ ಪೋಷಣೆಯ ಖರ್ಚು ಹೆಚ್ಚಾಗುತ್ತದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!