ಕೊಕ್ಕೋ ಬೆಳೆದರೆ ನೀರು ಕಡಿಮೆ ಸಾಕು.

ಪ್ರತೀಯೊಂದೂ ಬೆಳೆಗೂ ಅದಕ್ಕೆ ಸೂಕ್ತವಾದ ತಾಪಮಾನ ಪ್ರಾಮುಖ್ಯ ಅಂಶ. ಕಡಿಮೆಯೂ ಆಗಬಾರದು, ಹೆಚ್ಚೂ ಆಗಬಾರದು.  ತಾಪಮಾನದ ಏರು ಪೇರನ್ನು ನಿಯಂತ್ರಿಸಲು ಸಸ್ಯಗಳಿಂದ ಮಾತ್ರ ಸಾಧ್ಯ. ಜೊತೆಗೆ ಮಣ್ಣಿನ ಫಲವತ್ತೆತೆ ಹೆಚ್ಚುತ್ತಾ ಇದ್ದರೆ ಮಾತ್ರ ಇಳುವರಿ ಸ್ಥಿರವಾಗಿರುವುದು. ಇದಕ್ಕೆಲ್ಲಾ   ಸಹಾಯವಾದ ಬೆಳೆ  ಕೊಕ್ಕೋ. ಇದು ತಾಪಮಾನ ಕಡಿಮೆ ಮಾಡುತ್ತದೆ. ಮಣ್ಣಿನ ಫಲವತ್ತತೆ  ಹೆಚ್ಚಿಸುತ್ತದೆ. ನೀರಿನ ಆವೀಕರಣ ತಡೆಯುತ್ತದೆ.

ಎರಡು ವರ್ಷಕ್ಕೇ ಫಲ ಪ್ರಾರಂಭವಾಗುವ ಬೆಳೆ ಇದು.
 • ನೆಲಕ್ಕೆ ಬಿಸಿಲು ಹೆಚ್ಚು ಬಿದ್ದಷ್ಟೂ ಹೆಚ್ಚು ಹೆಚ್ಚು ನೀರಾವರಿ ಮಾಡಬೇಕಾಗುತ್ತದೆ.
 • ನೆಲದ ಮೇಲು ಭಾಗದಲ್ಲಿ ಸಸ್ಯದ ಹಸಿರು ಹೊದಿಕೆ  ಇದ್ದಷ್ಟೂ ವಾತಾವರಣ ತಂಪು ಇರುತ್ತದೆ.
 • ನಾವು ಬೆಳೆಯುವ ತೋಟಗಾರಿಕಾ ಬೆಳೆಗಳಾದ ಅಡಿಕೆ , ತೆಂಗು ಬೆಳೆಗಳಿಗೆ  ಸರಿ ಸುಮಾರು 30-35 ಡಿಗ್ರಿ ತನಕದ ತಾಪಮಾನ ಇರಬೇಕು.
 • ಇಷ್ಟರಲ್ಲೇ ತಾಪಮಾನದ ಬಿಸಿಯನ್ನು ಕಾಪಾಡಿಕೊಳ್ಳಲಿ ತೋಟದಲ್ಲಿ  ಮಿಶ್ರ ಬೆಳೆ ಬೇಕು.

ಮಿಶ್ರ ಬೆಳೆಗಳಾದ ಬಾಳೆ, ಕೊಕ್ಕೋ, ಕರಿಮೆಣಸು ಹೀಗೆ ಕೆಲವು ಮಿಶ್ರ ಬೆಳೆಗಳು ನಿರ್ದಿಷ್ಟ ವಾತಾವರಣದಲ್ಲಿ ತಾಪಮಾನ ಕಡಿಮೆ ಮಾಡಲು ಸಹಕಾರಿ. ಜೊತೆಗೆ ಬೆಳೆಸಿದವರಿಗೆ ಒಂದಷ್ಟು ಆದಾಯ ಜೊತೆಗೆ ಮಣ್ಣಿಗೆ ಸಾವಯವ ವಸ್ತುವನ್ನೂ ಕೊಡಬಲ್ಲುದು.  ಕೊಕ್ಕೋ ಸಸ್ಯವು ಕೊಡುವಷ್ಟು ಸಾವಯವ ತ್ಯಾಜ್ಯಗಳನ್ನು ಬೇರೆ ಯಾವ ಸಸ್ಯವೂ ಕೊಡಲಾರದು.

ಒಣಗಿಸಲಿಕ್ಕಿಲ್ಲ. ಹೆಕ್ಕಲಿಕ್ಕಿಲ್ಲ, ಏನೂ ಇಲ್ಲ. ಕೊಯ್ಯುವುದು, ಒಡೆಯುವುದು, ಮಾರುವುದು. ಹಸಿ ಬೀಜಗಳನ್ನು.

ಕೊಕ್ಕೋ ಬೆಳೆಯ ಅನುಕೂಲ:

 • ಅಡಿಕೆ  ತೋಟದಲ್ಲಿ ಎರಡು ಸಾಲಿಗೆ ಒಂದರಂತೆ ಎಕ್ರೆಗೆ ಸುಮಾರು 80-100 ತನಕ ಗಿಡಗಳನ್ನು  ಬೆಳೆಸಬಹುದು.
 • ತೆಂಗಿನ ತೋಟದಲ್ಲಿ ಮಧ್ಯಂತರದಲ್ಲಿ ಒಂದು ಸಾಲಿನಂತೆ ಸುಮಾರು 110 ಗಿಡಗಳ ತನಕ ಹಿಡಿಸಬಹುದು.
 • ಒಂದು ಕೊಕ್ಕೋ ಸಸ್ಯ ಸುಮಾರು 5 ವರ್ಷ ಬೆಳೆದ ಮೇಲೆ ವರ್ಷಕ್ಕೆ 100 ಕಾಯಿಗಳನ್ನು  ಕೊಡಬಲ್ಲುದು.  ಇಷ್ಟು ಕಾಯಿಗಳಿಂದ ಗಿಡವೊಂದರ 10 ಕಿಲೋ ಹಸಿ ಬೀಜವನ್ನು ಪಡೆಯಬಹುದು.
 • ಈಗಿನ ಧಾರಣೆಯಲ್ಲಿ ಇದು ಸುಮಾರು 600 ರೂ. ಉತ್ಪತ್ತಿ. ಇದಕ್ಕೆ ಸುಮಾರು 300 ರೂ. ಕೊಯಿಲು, ಗೊಬ್ಬರ ಮತ್ತು ಇನ್ನಿತರ ನಿರ್ವಹಣೆಯ ಖರ್ಚು  ಬೀಳುತ್ತದೆ. 50% ಲಾಭವಿದೆ.

ಅಪರೋಕ್ಷ  ಲಾಭ:

ಎಷ್ಟೊಂದು ಸೊಪ್ಪು, ತರಗೆಲೆ, ನೆರಳು ಬೇರೆ ಯಾವ ಬೆಳೆಯಲ್ಲೂ ಇಲ್ಲ.
 •  ಕೊಕ್ಕೋ ಬೆಳೆಯಲ್ಲಿ ಸಾಮಾನ್ಯ ಉತ್ಪತ್ತಿ ಎಂದೇ ಗ್ರಹಿಸೋಣ. ಹಲವಾರು ಜನ ಕೊಕ್ಕೋ ಗೊಬ್ಬರ ತಿನ್ನುತ್ತದೆ.
 • ಅಳಿಲು ಬರುತ್ತದೆ. ರೋಗ ಬರುತ್ತದೆ ಎಂಬೆಲ್ಲಾ ಕಾರಣಗಳಿಂದ ಇರುವ ಸಸಿಗಳನ್ನೂ ತೆಗೆದಿದ್ದಾರೆ.
 • ಆದರಿಂದ ಅವರ ಹೊಲಕ್ಕೆ ಎಷ್ಟು ನಷ್ಟ ಗೊತ್ತೇ?
 • ಒಂದು ಕೊಕ್ಕೋ ಸಸ್ಯ ಪ್ರತೀ ವರ್ಷ ನಿರ್ವಹಣೆಗಾಗಿ ಸವರುವಿಕೆ  ಮಾಡುವಾಗ ವಾರ್ಷಿಕ ಕನಿಷ್ಟ 10- 15 ಕಿಲೋ ಹಸಿ ಸೊಪ್ಪನ್ನು ಕೊಡುತ್ತದೆ.
 • ಇದು ಸ್ಥಳದಲ್ಲೇ  ಲಭ್ಯವಾಗುವ ಸಾವಯವ ವಸ್ತು. ಇಷ್ಟು ಸಾವಯವ ವಸ್ತುಗಳ ಸದುಪಯೋಗ ಮಾಡಿದ್ದೇ  ಆದರೆ ಆ ಸಸ್ಯದ ಪೋಷಕದ ಅವಶ್ಯಕತೆ  ಅಲ್ಲೇ ಆಗುತ್ತದೆ.

ಕೊಕ್ಕೋ ಸಸ್ಯದ ಎಲೆಯಲ್ಲಿ  ಉಳಿದ ಕೆಲವು ಎಲೆಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಇರುತ್ತವೆ.ಆ ಕಾರಣದಿಂದಲೇ ಇದನ್ನು ಹಸು, ಮೇಕೆಗಳು ಇಷ್ಟಪಟ್ಟು ತಿನ್ನುವುದು. ಇಷ್ಟಕ್ಕೂ ಇದು ಪೋಷಕ ಕೊಟ್ಟು ಬೆಳೆಸುವ ಸಸ್ಯವಾದ ಕಾರಣ ಅದರಲ್ಲಿ ಪೋಷಕಗಳ ಉಳಿಕೆ  ಹೆಚ್ಚು ಇರುತ್ತದೆ.

ಧೀರ್ಘಾವದಿ ವರೆಗೂ ಅಂದರೆ  50 ವರ್ಷಗಳ ತನಕವೂ ಇಳುವರಿ ಕೊಡುತ್ತಲೇ ಇರುತ್ತದೆ.

 ಲಾಭದಾಯಕತೆ:

 • ಒಂದು ಸಸ್ಯದಲ್ಲಿ 5 ಕಿಲೋ ಕೊಕ್ಕೋ ಬೀಜಸಿಗುವಾಗ ಅದರಲ್ಲಿ ಕೊಕ್ಕೋ ಕೋಡಿನ ತ್ಯಾಜ್ಯಗಳು 10  ಕಿಲೋ ದಷ್ಟು ಸಿಗುತ್ತದೆ.
 • ಇದರಲ್ಲೂ  ಪೋಷಕಗಳು ಇರುವ  ಕಾರಣ ಅದನ್ನು ಗೊಬ್ಬರವಾಗಿ ಬಳಕೆ  ಮಾಡಬಹುದು.
 • ಕೊಕ್ಕೋ ಸಸ್ಯದ ಬುಡದಲ್ಲಿ ಬೀಳುವ ತರಗೆಲೆ  ನೆಲಕ್ಕೆಒಂದು ಹೊದಿಕೆಯಾಗಿ ಇರುತ್ತದೆ.  
 • ಇದರ ಮೇಲೆ ನೀರು ಬಿದ್ದಾಗ ಅದನ್ನು ಆವೀಕರಣ ಆಗಲು ಅದು ಬಿಡುವುದಿಲ್ಲ. ಕೊಕ್ಕೋ ಸಸ್ಯ ಇದ್ದಲ್ಲಿ ತೇವಾಂಶ ಇರುತ್ತದೆ.
 • ಕೊಕ್ಕೋ ಸಸ್ಯ ಉಳ್ಳವರು ಹೈನುಗಾರಿಕೆ ಮಾಡಬಹುದು. ಇದರ ಸೊಪ್ಪು ಪಶು ಮೇವು. ಕೋಡಿನ  ಬಾಗವನ್ನೂ ಹಸುಗಳು ತಿನ್ನುತ್ತವೆ.
 • ಇತರ ಪಶು ಮೇವಿನ ಜೊತೆಗೆ ಇದನ್ನು ಕೊಟ್ಟು ಉಳಿತಾಯ ಮಾಡಬಹುದು.
 • ಕೊಕೋ ಬೆಳೆ ಕೆಲವೊಮ್ಮೆ ಲಾಭದಾಯಕವಲ್ಲದೆ ಇರಬಹುದು. ಕೆಲವೊಮ್ಮೆ  ಲಾಭದಾಯಕವೂ ಆಗಿರುತ್ತದೆ.
 • ಲಾಭದಾಯಕ  ಅಲ್ಲದಿದ್ದಾಗ ಹೆಚ್ಚು ಪ್ರೂನಿಂಗ್ ಮಾಡಿ ಸಸ್ಯ ಬೆಳವಣಿಗೆ ನಿಯಂತ್ರಿಸಿ.
 • ಬೆಲೆ ಇರುವ ವರ್ಷ ಬೆಳೆ  ಪಡೆಯಿರಿ. ಲಾಭದಾಯಕ ಅಲ್ಲ ಎಂದು ಅದರ ಅಪರೋಕ್ಷ ಲಾಭವನ್ನು ಕಳೆದುಕೊಳ್ಳಬೇಡಿ.
 •   ಬುಡಭಾಗದಲ್ಲಿ ತರಗೆಲೆಗಳ(ಬುಡಭಾಗದಲಿ ) ಹಾಸಲು ಉತ್ತಮವಾಗಿ ಹೊದಿಕೆಯಾಗುವ ಕಾರಣದಿಂದ ಕಳೆಗಳು ಬೆಳೆಯುವುದಿಲ್ಲ.
 • ತರಗೆಲೆ ರೂಪದಲ್ಲಿ ಒಂದು ಕೊಕ್ಕೋ ಗಿಡ ಕನಿಷ್ಟ ಒಂದು ಬುಟ್ಟಿಗೂ ಹೆಚ್ಚಿನ ತರಗೆಲೆಯನ್ನು ಉದುರಿಸುತ್ತದೆ.
 •  ಇದರ ಪ್ರೂನಿಂಗ್ ಹಾಗೂ ಚಿಗುರು ಚಿವುಟುವಿಕೆಯಲ್ಲಿ ದೊರೆಯುವ ಹಸಿ ಸೊಪ್ಪು ಪಶು ಆಹಾರವಾಗುತ್ತದೆ.
 • ಕೊಕ್ಕೋ  ಕೊಡು ಒಡೆಯುವಾಗ ಒಂದು ಕೊಕ್ಕೋ ಕೋಡಿನಲ್ಲಿ 30% ಮಾರಾಟಕ್ಕೆ ಬಳಕೆಯಾಗುವ ಬೀಜವಾದರೆ  ಉಳಿದ 70% ಕೋಡಿನ ಭಾಗ ಸಹ ಪಶುಗಳಿಗೆ ಆಹಾರವಾಗುತ್ತದೆ.
 • ಒಂದು ವೇಳೆ ಪಶುಗಳಿಗೆ ಅದನ್ನು ಬಳಸಲಾಗದೇ ಇದ್ದರೆ ಇದನ್ನು ಸಾವಯವ ಗೊಬ್ಬರವಾಗಿ ಬಳಕೆ ಮಾಡಬಹುದು. 
 • ಬೆಳೆ ಉಳಿಕೆ ಆದ ಕಾರಣ ಇದರಲ್ಲಿ ಗರಿಷ್ಟ ಪ್ರಮಾಣದಲ್ಲಿ ಪೋಷಕಗಳ  ಉಳಿಕೆಯೂ ಇರುವ ಕಾರಣ ಇದು ಉತ್ತಮ ಸಾವಯವ ಗೊಬ್ಬರವಾಗುತ್ತದೆ.
 •  ಕೊಕ್ಕೋ ಸಸ್ಯವನ್ನು ವರ್ಷದುದ್ದಕ್ಕೂ  ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಚಿಗುರು ತೆಗೆಯುತ್ತಾ ಅಡ್ದಾದಿಡ್ಡಿ ಬೆಳೆದ ಗೆಲ್ಲುಗಳನ್ನು ಉಳಿಸುತ್ತಾ ಸವರುವಿಕೆ ಮಾಡುತ್ತಿರಬೇಕು ಆಗ ಅದರ ಬೆಳೆವಣಿಗೆ ಮುಖ್ಯ ಬೆಳೆಗೆ ತೊಂದರೆ ಉಂಟು ಮಾಡುವುದಿಲ್ಲ.
ಇಷ್ಟೊಂದು ಸಾವಯವ ವಸ್ತುಗಳನ್ನು  ಮರಳಿ ಕೊಡುತ್ತದೆ.

 ಯಾವತ್ತೂ ಬೇಡಿಕೆ  ಇದೆ:

ಕೊಕ್ಕೋ ಒಂದು ಆಹಾರ ಬೆಳೆ. ಈ ಬೆಳೆಯ ಮೂಲ ದಕ್ಷಿಣ ಅಮೇರಿಕಾದ ಅಮೇಜಾನ್ ಪ್ರದೇಶ. ಹಿಂದೆ ಕೊಕ್ಕೋ ಬೀಜಗಳನ್ನು ಒಣಗಿಸಿ ಅದನ್ನು ಅರೆದು ಕಪ್ಪಾದ ಶಕ್ತಿವರ್ಧಕ ಪಾನೀಯ ತಯಾರಿಸುತ್ತಿದರಂತೆ. ಅದನ್ನೇ ಸ್ವಲ್ಪ ಸ್ವಲ್ಪ ಬದಲಾವಣೆ ಮಾಡುತ್ತಾ ಅದಕ್ಕೆ ಹಾಲು ಬೆರೆಸಿ, ಸಕ್ಕರೆ ಬೆರೆಸಿ ಪಾನೀಯ ಮಾಡಲು  ಪ್ರಾರಂಭಿಸಲಾಯಿತು. 

 • ನಂತರ ಅದರಲ್ಲಿ ಚಾಕಲೇಟ್ ತಯಾರಿಸುವುದು  ಪ್ರಾರಂಭವಾಯಿತು. ಹಾಗೆಯೇ  ಕೊಕ್ಕೋದಿಂದ ಕೊಬ್ಬು,( ಬಟರ್) ಬೇಪಡಿಸುವುದು, ಬೇರೆ ಬೇರೆ ಗ್ರೇಡ್‍ನ ಉತ್ಪನ್ನಗಳನ್ನು  ತಯಾರಿಸುವಿಕೆ  ಚಾಲನೆಗೆ ಬಂತು.
 •  ಪ್ರಪಂಚದಲ್ಲಿ ಅತೀ ಹೆಚ್ಚು ಕೊಕ್ಕೋ ಬೆಳೆಯುವ ದೇಶಗಳು ಐವರೀ ಕೊಸ್ಟ್, ಘಾನ, ಇಂಡೋನೇಶಿಯಾ, ನೈಜೀರಿಯಾ, ಮಲೇಶಿಯಾ, ಕ್ಯಮಾರಾನ್ ಮುಂತಾದ ದೇಶಗಳು.
 • ಕೊಕ್ಕೋ ಬೆಳೆಯನ್ನು ಮೊದಲು ಪಶ್ಚಿಮ ಘಟ್ಟದಲ್ಲಿ ಬೆಳೆದು ನೊಡಲಾಯಿತು, ನಂತರ ಅದನ್ನು 1970 ರಲ್ಲಿ ನಮ್ಮ ಅಡಿಕೆ, ತೆಂಗು,ತಾಳೆ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುವ ಬಗ್ಗೆ ಸಂಶೋಧನೆಗಳಾಗಿ ಈಗ ಅದು ಒಂದು ಮಿಶ್ರ ಬೆಳೆಯಾಗಿ ಸ್ಥಾನವನ್ನು ಪಡೆದಿದೆ.

 ಈ ಸಸ್ಯಕ್ಕೆ  ಕನಿಶ್ಟ 50 % ನೆರಳು ಬೇಕು. ಇಂತಹ ಪ್ರದೇಸದಲ್ಲಿ ಮಿಶ್ರ ಬೆಳೆಯಾಗಿ  ಬೆಳೆಸಬಹುದು. ಹಾಗೆಂದು ಕಾಡಿನಲ್ಲಿ ಬೆಳೆಸಿದರೆ ಲಾಭದಾಯಕವಲ್ಲ. ಈಗ ಕೊಕ್ಕೋ ಬೆಳೆ ಕರ್ನಾಟಕ, ತಮಿಳುನಾಡು, ಕೇರಳ ಆಂದ್ರ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ನಮ್ಮ ರಾಜ್ಯದಲ್ಲಿ ಕರಾವಳಿ, ಮಲೆನಾಡು, ಅರೆ ಮಲೆನಾಡು, ನೀರಾವರಿ ಅನುಕೂಲ ಇರುವ ಬಯಲು ಸೀಮೆಯಲ್ಲೂ ಬೆಳೆ ಬೆಳೆಸಲಾಗುತ್ತದೆ.

 

Leave a Reply

Your email address will not be published. Required fields are marked *

error: Content is protected !!