ಮಂಗ ಮುಟ್ಟದ ಈ ಬಾಳೆ ಬೆಳೆದರೆ ಎಲೆ ಮಾರಾಟದಿಂದ ಲಾಭಗಳಿಸಬಹುದು.

by | Sep 25, 2021 | Banana (ಬಾಳೆ), Fruit Crop (ಹಣ್ಣಿನ ಬೆಳೆ) | 0 comments

ನಾವು ನೆಟ್ಟು ಬೆಳೆಸುವ ಎಲ್ಲಾ ತರಾವಳಿಯ ಬಾಳೆಗೂ ಒಂದಿಲ್ಲೊಂದು ದಿನ ರೋಗ ಬರಬಹುದು. ಆದರೆ ಇದಕ್ಕೆ ರೋಗ ಎಂಬುದೇ ಇಲ್ಲ. ಹಾಗೆಂದು ಇದು ಹಣ್ಣಿಗೆ ಹೊಂದುವ ಬಾಳೆ ಅಲ್ಲ. ಬಾಳೆ ಗೊನೆ ಬಿಟ್ಟರೂ ಒಳಗೆ ಬೀಜಗಳೇ ಇರುತ್ತವೆ.ಈ ಬಾಳೆ ಹಣ್ಣನ್ನು ಮಂಗ ತಿನ್ನಲಿ. ಎಲೆ ಮಾತ್ರ ನಾವು ಕೊಯ್ದು ಮಾರಾಟ ಮಾಡಬಹುದು. ಇದು ಎಲೆಗಾಗಿಯೇ ಇರುವ ಬಾಳೆ.

ಬಾಳೆ ಎಲೆ ಎಂಬುದು ಪರಿಸರ  ಸ್ನೇಹೀ ಅಗತ್ಯ ವಸ್ತು. ಹೋಟೇಲುಗಳು , ಸಭೆ ಸಮಾರಂಭಗಳಲ್ಲಿ ಬಾಳೆ ಹಣ್ಣಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವ ಬಾಳೆ ಎಲೆ ಈಗ ಕೊರತೆಯಲ್ಲಿದೆ.  ಆದ ಕಾರಣ ಬಾಳೆಯನ್ನು ಎಲೆಗಾಗಿಯೇ ಬೆಳೆಸಬಹುದು. ಇದನ್ನು ಈಗ ತಮಿಳುನಾಡಿನಲ್ಲಿ ಇದನ್ನು ಬಹಳಷ್ಟು ರೈತರು  ಸದುಪಯೋಗಮಾಡಿಕೊಂಡ ಕಾರಣ  ನಮ್ಮಲ್ಲಿ ಇಂದು ಬಾಳೆ ಎಲೆಯ ಲಭ್ಯತೆ ಇದೆ. ಇದನ್ನು ನಾವೂ ಯಾಕೆ ಮಾಡಬಾರದು?

ಬೀಜ ಬಾಳೆಯ ಎಲೆ
ಬೀಜ ಬಾಳೆಯ ಎಲೆ

ಬಾಳೆ ಎಲೆಯ ಲಾಭದ ಲೆಕ್ಕ:

 • ಬಾಳೆಯನ್ನು ಎಲೆಗಾಗಿ ಬೆಳೆಯಬಹುದು.ಬಾಳೆ ಎಲೆಗೆ ಬೇಡಿಕೆ ಇಲ್ಲ ಎಂದಾಗುವುದಿಲ್ಲ.
 • ಕರ್ನಾಟಕದ ಹೆಚ್ಚಿನ ಕಡೆಗಳಿಗೆ ತಮಿಳುನಾಡಿನಿಂದ  ಬಾಳೆ ಎಲೆ ಬರುತ್ತದೆ.
 • ಪ್ರಸ್ತುತ ಧಾರಣೆಯಲ್ಲಿ ಬಾಳೆ ಎಲೆಗೆ  3-5 ರೂ ತನಕ ಖರೀದಿ ದರ ಇದೆ.
 • ಬಾಳೆ ಎಲೆಯ ಕೊರತೆಗಾಗಿ ಕಾಗದದ ಪ್ಲಾಸ್ಟಿಕ್ ಲೇಪಿತ ಎಲೆಗಳ ಬಳಕೆಯಾಗುತ್ತಿದೆ.
 • ಇದು ಆರೋಗ್ಯಕ್ಕೆ ಉತ್ತಮವಲ್ಲ.  ಬಾಳೆ ಎಲೆಯೇ ಆರೋಗ್ಯಕೆ  ಶ್ರೇಷ್ಟ.
 • 1 ಬಾಳೆಯಲ್ಲಿ ಸುಮಾರು 30-40 ಎಲೆಗಳು ದೊರೆಯುತ್ತವೆ.
 • ಇದರಲ್ಲಿ ತುದಿ ಎಲೆಯಲ್ಲದೆ ನಂತರ ಮೂರು ತುಂಡು ಎಲೆ ಸಿಗುತ್ತದೆ.
 • ಪೂರ್ತಿ ಎಲೆ ದಂಟಿಗೆ 30 ರೂ. ಖರೀದಿ ದರ ಇದೆ.
 • ಇದು ಸೀಸನ್ ಹೊಂದಿಕೊಂಡು ಹೆಚ್ಚು ಆಗುತ್ತದೆ.
 • ತಮಿಳು ನಾಡಿನಲ್ಲಿ ಬಿಡಿಸದ ಸುಳಿ ಎಲೆಯನ್ನು ಕಠಾವು ಮಾಡುತ್ತಾರೆ.

ಎಲೆಗಾಗಿ ಬಾಳೆ ಬೆಳೆಯುವಾಗ ಅಧಿಕ ಕಂದುಗಳನ್ನು ಉಳಿಸಿಕೊಳ್ಳಬೇಕು. ಒಂದು ಬಾಳೆಯಲ್ಲಿ 5-6 ಸಂಖ್ಯೆಯ ಕಂದುಗಳನ್ನು ಉಳಿಸಿದರೆ, ಸಾಕಷ್ಟು ನೀರು ಗೊಬ್ಬರ ಕೊಡುತ್ತಿದ್ದರೆ ಒಂದು ಹಿಂಡು ಬಾಳೆಯಲ್ಲಿ 15-20 ದಿನಕ್ಕೆ ಒಂದು ಎಲೆ ದೊರೆಯುತ್ತದೆ.

ಬಾಳೆಯ ಹಣ್ಣು ಹೀಗೆ ಇರುತ್ತದೆ. ಇದರ ಬೀಜ ಎಲ್ಲಾ ಹುಟ್ಟುತ್ತದೆ
ಬಾಳೆಯ ಹಣ್ಣು ಹೀಗೆ ಇರುತ್ತದೆ. ಇದರ ಬೀಜ ಎಲ್ಲಾ ಹುಟ್ಟುತ್ತದೆ
 • ಒಟ್ಟು 5 ಕಂದುಗಳಿಂದ ಸರಾಸರಿ 3 ಎಲೆಯಂತೆ 15  ಎಲೆ  ದಂಟು ಪಡೆಯಬಹುದು.
 • ಗೊನೆ ಪಡೆಯುವುದಕ್ಕೆ ಮಾಡುವಷ್ಟು ಆರೈಕೆ ಬೇಕಾಗಿಲ್ಲ.
 • ಒಂದು ಎಕ್ರೆ ಬಾಳೆಯನ್ನು ಗೊನೆಗಾಗಿ ಬೆಳೆಸಿದರೆ ಅದಕ್ಕೆ ತಗಲುವ ಖರ್ಚು 35,000  ಕ್ಕೂ ಹೆಚ್ಚು.
 • ಎಲೆಗಾಗಿ ಬೆಳೆಯಲು 28,000  ಖರ್ಚು. ಗೊನೆಗೆ 1200 ಬಾಳೆ ಆದರೆ ಎಲೆಗೆ 3000  ಬಾಳೆ ಸಸಿ ಹಿಡಿಸಬಹುದು.
 • ಒಂದು ಎಕ್ರೆಯಲ್ಲಿ ಗೊನೆ ಆದರೆ 25 ಟನ್ ಬಾಳೆ ದೊರೆತರೆ, ಸುಮಾರು 1,70 ,000  ಎಕ್ರೆ ದೊರೆಯುತ್ತದೆ.
 • ಸರಾಸರಿ ಎಲೆಗೆ 2.5  ರೂ ದೊರೆತರೆ ಖರ್ಚು  ಕಳೆದು 3 .75 ಲಕ್ಷ ಆದಾಯ ಇದೆ.
 • ಗೊನೆಯಿಂದ ಪಡೆಯಬಹುದಾದ ಆದಾಯ ಸುಮಾರು   2 ಲಕ್ಷದಷ್ಟು.

ಇದು ಪೇಟೆ ಪಟ್ಟಣ ಹತ್ತಿರ ಇರುವವರಿಗೆ ಹೆಚ್ಚು ಅನುಕೂಲಕರ. ದೇವಸ್ಥಾನ –ಹಾಲ್  ಇರುವಲ್ಲಿ ಮಾರುಕಟ್ಟೆ ಸುಲಭ. ಉಳಿದ ಕಡೆ ಸಾಗಾಣಿಕೆ ಖರ್ಚು ಇದೆ. ಈಗ ಹಳ್ಳಿಗಳಲ್ಲೂ ಬಾಳೆ ಎಲೆ ಬೇಕು. ಬರೇ ಬಾಳೆ ಎಲೆಗೆ ಮಾತ್ರವಲ್ಲ. ನವರಾತ್ರೆ, ದೀಪಾವಳಿ, ಚೌತಿ ಮುಂತಾದ ವಿಶೇಷ ದಿನಗಳಲ್ಲಿ ಬಾಳೆ ಮರಿ( ಕಂದು) ಗಳಿಗೂ ಭಾರೀ ಬೇಡಿಕೆ ಇರುತ್ತದೆ. ಬೆಂಗಳೂರಿನಂತಹ ಪಟ್ಟಣದಲ್ಲಿ ಕೆ ಆರ್ ಮಾರ್ಕೆಟ್ ಸುತಮುತ್ತ ಕಿಲೋ ಮೀಟರ್ ಉದ್ದಕೂ ಈ ಮರಿಗಳನ್ನು ಮಾರಾಟ ಮಾಡಲಾಗುತ್ತದೆ.

ಎಲ್ಲಾ ಬಾಳೆಯೂ  ಆಗುವುದಿಲ್ಲ:

ಸ್ವಚ್ಚವಾದ ಬಾಳೆ ಎಲೆ
ಸ್ವಚ್ಚವಾದ ಬಾಳೆ ಎಲೆ
 • ಪ್ರಾದೇಶಿಕವಾಗಿ ಬೇರೆ ಬೇರೆ ನಮೂನೆಯ ಎಲೆಗಳನ್ನು ಬಳಕೆ ಮಾಡಲಾಗುತ್ತದೆ.
 • ಕರಾವಳಿಯಲ್ಲಿ ಪುಟ್ಟುಬಾಳೆ, ಕದಳಿ, ಗಾಳಿ, ಬೂದಿ ಮುಂತಾದ ಬಾಳೆಯನ್ನು ಎಲೆಗಾಗಿ ಬಳಕೆ ಮಾಡುತ್ತಾರೆ.
 • ತಮಿಳುನಾಡಿನಲ್ಲಿ ಪೂವನ್ ತಳಿ, ಕರ್ಪೂರ ವಳ್ಳಿ ತಳಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.
 • ಇದರ ಎಳೆ ಎಲೆಯನ್ನೇ ಬಳಕೆ ಮಾಡುತ್ತಾರೆ.
 • ನಾವು ಸಾಂಪ್ರದಾಯಿಕವಾಗಿ ಎಲೆ ಕೊಯ್ಯುವ ಬಾಳೆಯಲ್ಲಿ ಬಾಳೆ ಮರಿ ಸಣ್ಣದಿರುವಾಗ ಎಲೆ ಕೊಯಿದರೆ ಮಾತ್ರ ಎಲೆ ಅಚ್ಚುಕಟ್ಟು.
 • ಬೆಳೆದರೆ ಎಲೆ ಉದ್ದೇಶಕ್ಕೆ ಹೊಂದಿಕೆಯಾಗುವುದಿಲ್ಲ.
 • ಎಲೆ ಎಂದರೆ ಎಲ್ಲಾ ಎಲೆಗಳ ಉದ್ದ ಅಗಲ ಒಂದೇ ರೀತಿ ಇದ್ದು, ಆಕರ್ಷಕವಾಗಿರಬೇಕು.

ಕರಾವಳಿಯಲ್ಲಿ ತುದಿ ಎಲೆಗೆ ಬೇಡಿಕೆ. ಇದಕ್ಕೆ ಸೀಸನ್ ಹೊಂದಿ 5 -6 ರೂ ತನಕವೂ ಬೆಲೆ ಏರುತ್ತದೆ. ಇದರ ಕೊರತೆ ಇದೆ. ಎಲೆಯ ಲಭ್ಯತೆ ಇಲ್ಲದೆ ಈಗ ಪ್ಲೇಟುಗಳು ಚಾಲ್ತಿಯಾಗುತ್ತಿವೆ.

 • ಎಲೆಗಾಗಿ ಬಾಳೆ ಬೆಳೆಸುವಾಗ ಸೂಕ್ತ ತಳಿಯನ್ನು ಆಯ್ಕೆ ಮಾಡಬೇಕು.
 • ಈಗ ಅಂಥಹ ತಳಿಯನ್ನು  ಬಿಡುಗಡೆ ಮಾಡಲಾಗಿಲ್ಲ.

 ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ ಮತ್ತು Association for the Improvement in Production and Utilization of Banana (AIPUB)  ಇವರು ಬೀಜ  ಉಳ್ಳ ನಾಟೀ ತಳಿಯ (Wild seed banana) ಬಾಳೆಯನ್ನು ಎಲೆ ಉದ್ದೇಶಕ್ಕೆ ಬೆಳೆಸಬಹುದೆನ್ನುತ್ತಾರೆ.ಈ ಬಾಳೆ ಒಮ್ಮೆ ನೆಟ್ಟರೆ ಸಾಕು, ಅದು ಎಷ್ಟೇ ವರ್ಷವಾದರೂ ಅಳಿಯುವುದೇ ಇಲ್ಲ. ವರ್ಷದಿಮ್ದ ವರ್ಷಕ್ಕೆ ಹಿಂಡು  ದೊಡ್ಡದಾಗಿ, ಎಲೆ ಹೆಚ್ಚು ಕೊಡುತ್ತದೆ. ಬಾಳೆ ನಾರಿನ ಹಗ್ಗಕ್ಕೂ ಆಗುತ್ತದೆ.

 • ಇದು ಗೊನೆ ಬಿಡುತ್ತದೆಯಾದರೂ ಸಣ್ಣ ಗೊನೆ. ಬೀಜಗಳೇ ಇರುತ್ತದೆ.
 • ಬೀಜ ಹುಟ್ಟುತ್ತದೆ. ಅಧಿಕ ಎಲೆ ಕೊಡುತ್ತದೆ.
 • ಅತ್ಯಧಿಕ ಕಂದುಗಳನ್ನು ಬಿಡುತ್ತದೆ.
 • ಕಂದು 2  ತಿಂಗಳು ಬೆಳೆದರೆ ಸಾಕು ಅದರಲ್ಲಿ ಎಲೆ ದೊರೆಯುತ್ತದೆ.
 • ಯಾವುದೇ ರೋಗ ಇಲ್ಲ. ಕೀಟ ಇಲ್ಲ.
 • ಒಮ್ಮೆ ನೆಟ್ಟರೆ  ಸಾಯುವ ಪ್ರಮೇಯ ಇಲ್ಲ.
 • ಒಂದು ಬಾಳೆಯಿಂದ 2 ವರ್ಷದಲ್ಲಿ 25 ಕ್ಕೂ ಹೆಚ್ಚು ಕಂದು ಬರುತ್ತದೆ.
 • ಅಚ್ಚುಕಟ್ಟಾದ ಎಲೆ.  ನೀರಾವರಿ ಹದ ಫಲವತ್ತಾದ ಮಣ್ಣು ಇದ್ದಲ್ಲಿ ಗೊಬ್ಬರದ ಅವಶ್ಯಕತೆ ಇಲ್ಲ.
 • ಈ ಬಾಳೆಯನ್ನು ಎಲೆ ಉದ್ದೇಶಕ್ಕಾಗಿ ಬೆಳೆದರೆ ಮತ್ತೆ ಮತ್ತೆ ನಾಟಿ ಕೆಲಸ ಇಲ್ಲ.
 • ಈ ಬಾಳೆ ಹಣ್ಣಿನ ಬೀಜ  ಹುಟ್ಟುತ್ತದೆ.
 • ಕಂದುಗಳಿಂದಲೂ , ಬೀಜದಿಂದಲೂ ಸಸಿ ಮಾಡಿಕೊಳ್ಳಬಹುದು

ರೈತರು ಬಾಳೆ  ಎಲೆ ಉತ್ಪಾದನೆ ಅಲ್ಲದೆ ಅದನ್ನು ಹಾಗೆಯೇ ನಿರ್ಜಲೀಕರಣ ಮಾಡಿ ಪ್ಲೇಟು, ತಟ್ಟೆ ಮುಂತಾದ  ಉತ್ಪನ್ನ  ಮಾಡುವ ಉದ್ದಿಮೆಗಳೂ ಬಂದಿವೆ. ಈ ವೃತ್ತಿಯ ಬಗ್ಗೆ ಕೆಲವು ಕೃಷಿಕರು ಗಮನಹರಿಸಬಹುದು. ಆರೋಗ್ಯದ ದೃಷ್ಟಿಯಿಂದ ಬಾಳೆ ಎಲೆಯಲ್ಲಿ ಉಟ ಮಾಡುವುದು ಶ್ರೇಷ್ಟ. ಇದು ಎಲ್ಲರಿಗೂ ಗೊತ್ತು. ಆದರೆ ಲಭ್ಯತೆ ಕಷ್ಟವಾದ ಕಾರಣ ಪ್ಲೇಟು ಬಟ್ಟಲು ಬಂದಿದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!