ಡ್ರಿಪ್ ಸಮಸ್ಯೆ ಕೊಡುತ್ತಿದೆಯೇ ? ಕಾರಣ ಇಲ್ಲಿದೆ.

ಡ್ರಿಪ್ ವ್ಯವಸ್ಥೆಯಲ್ಲಿ ಅಡಿಕೆ ಬೆಳೆ

ಸರಕಾರ ಡ್ರಿಪ್ ನೀರಾವರಿಗೆ  ಸಹಾಯಧನ ಕೊಡುತ್ತದೆ ಎಂದು ಹನಿ ನೀರಾವರಿ ಮಾಡಿಸಿಕೊಳ್ಳಬೇಡಿ. ನಿಮಗೆ ಅದರ ಮೇಲ್ವಿಚಾರಣೆ ಮಾಡಲು ಜ್ಞಾನ  ಇದ್ದರೆ ಮಾತ್ರ ಮಾಡಿಕೊಳ್ಳಿ.
ಗರಿಷ್ಟ ಪ್ರಮಾಣದಲ್ಲಿ ನೀರು ಉಳಿಸುವ ನೀರಾವರಿ ವ್ಯವಸ್ಥೆ ಎಂದರೆ ಹನಿ ನೀರಾವರಿ. ಇದು ಸಸ್ಯಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಒದಗಿಸಿಕೊಡುವ ವ್ಯವಸ್ಥೆ. ಗಂಟೆಗೆ ಕೆಲವೇ ಲೀಟರುಗಳಷ್ಟು  ನೀರನ್ನು ಸಸ್ಯದ ಬೇರು ವಲಯದ ಒಂದು ಅಥವಾ ಎರಡು ಕಡೆಗೆ ತೊಟ್ಟಿಕ್ಕುವ ಈ ವ್ಯವಸ್ಥೆ ಉತ್ತಮ ಹೌದು ಆದರೆ ಮಣ್ಣು, ನೀರು  ಮುಂತಾದವುಗಳನ್ನು  ಅವಲಂಭಿಸಿ ಅದರ ಫಲಿತಾಂಶ ಇದೆ ಎಂಬುದನ್ನು ಎಲ್ಲಾ ರೈತರೂ ತಿಳಿದಿರಬೇಕು.

ಡ್ರಿಪ್ ನಲ್ಲಿ ನೀರು ಹೊರಚೆಲ್ಲುವಿಕೆ

 • ರಾತ್ರೆ ಬಚ್ಚಲು ಮನೆಯಲ್ಲಿ ಟ್ಯಾಪ್  ಸರಿಯಾಗಿ ಬಂದ್ ಮಾಡದೆ ಇದ್ದರೆ ಅದರಲ್ಲಿ ಒಂದೊಂದೇ ತೊಟ್ಟು ನೀರು ಬಕೆಟ್ ಗೆ ಟಪ್ ಟಪ್ ಎಂದು ಬೀಳುತ್ತಾ ಇರುತ್ತದೆ.
 • ಬೆಳಗ್ಗೆ ನೋಡುವಾಗ ತೊಟ್ಟು ತೊಟ್ಟಾಗಿ ನೀರು ಬಿದ್ದರೂ ಸಹ ಅದು ಬಕೆಟ್ ತುಂಬುವಷ್ಟಾಗಿರುತ್ತದೆ.
 • ಇದುವೇ ಹನಿ ನೀರಾವರಿ ವ್ಯವಸ್ಥೆಯ ಒಳ ತಿರುಳು.

ಹನಿ ನೀರಾವರಿ ಎಂದರೆ ಹೀಗೆ:

 • ನೀರನ್ನು ಪಂಪಿನಿಂದ  ಪೈಪುಗಳ ಮೂಲಕ ಹರಿಸಿ, ನಂತರ ಅದನ್ನು ಉಪ ಕೊಳವೆಗಳ ಮೂಲಕ ಹರಿಸಲಾಗುತ್ತದೆ.
 • ಆ ಉಪಕೊಳವೆಗಳಲ್ಲಿ ಅಲ್ಲಲ್ಲಿ ನೀರು ತೊಟ್ಟಿಕ್ಕುವ ಸಾಧನದ ಮೂಲಕ ನೀರು ಬೀಳಬೇಕಾದಲ್ಲಿ ಬೀಳುತ್ತದೆ.
 • ಅತೀ ಕಡಿಮೆ ಪ್ರಮಾಣದಲ್ಲಿ ನೀರು ಬೀಳುವ ಕಾರಣ ನೀರು ಬೀಳುವ  ಜಾಗ ತೇವ ಹೊಂದುತ್ತದೆ.
 • ಎಲ್ಲಿ ತೇವಾಂಶ ಇರುತ್ತದೆಯೋ ಅಲ್ಲಿ ಹೆಚ್ಚಿನ ಬೇರುಗಳ ಬೆಳವಣಿಗೆ ಆಗುತ್ತದೆ.
 • ಹನಿ ನೀರಾವರಿ ಎಂಬುದು ಸೀಮಿತ ಅರ್ಥದ್ದು. ಮಿತ ನೀರಾವರಿ ಎಂಬುದು ವಿಸ್ತೃತ ಅರ್ಥದ್ದು.
 • ನೀರಿನ ಮೂಲ ಕಡಿಮೆ ಇರುವವರಿಗೆ, ಕಡಿಮೆ ನೀರನ್ನು ಬಳಸಿ ಅಧಿಕ ಪ್ರದೇಶದಲ್ಲಿ ಕೃಷಿ ಮಾಡುವರೇ ಸಹಾಯಕವಾಗುವಂತದ್ದು ಮಿತ ನೀರಾವರಿ.
 • ಇಲ್ಲಿ ಕಡಿಮೆ ,ಅತೀ ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡುವ ವ್ಯವಸ್ಥೆಗಳು ಇವೆ.

ಯಾರಿಗೆ ಹನಿ ನೀರಾವರಿ ಸೂಕ್ತ:

 • ಕೊಳವೆ ಬಾವಿಯ ನೀರನ್ನು, ಕೆರೆ ನೀರನ್ನು ಹಾಗೂ ಇನ್ನಿತರ ನೀರಿನ ಮೂಲಗಳಿರುವ ಅದು ಬೇಸಿಗೆಯ ಸಮಯದಲ್ಲಿ ಕಡಿಮೆಯಾಗು ಕಡೆ  ಮಿತ ನೀರಾವರಿ ಮಾಡಿಕೊಳ್ಳುವುದು ಸೂಕ್ತ.
 • ಇದರಿಂದ ನೀರಿನ ಮೂಲ ಕಡಿಮೆಯದರೂ ಬೆಳೆಗಳಿಗೆ ಅಗತ್ಯವಾದ ನೀರಿನ ಕೊರತೆ ಉಂಟಾಗಲಾರದು.
 • ಹೆಚ್ಚಿನ ಪ್ರದೇಶಕ್ಕೆ ನೀರುಣಿಸಬಹುದು.
 • ಯಥೇಚ್ಚ ನೀರಿನ ಮೂಲ ಇರುವವರು, ಎಲ್ಲವನ್ನೂ ಕೆಲಸದವರಿಂದಲೇ ಮಾಡಿಸಿಕೊಳ್ಳುವವರು, ಬೇರೆ ವ್ಯವಸ್ಥೆಯನ್ನು ಮಾಡಬಹುದು. ಆದರೆ ಯಾವುದೇ ಬೆಳೆಗೆ ಯತೇಚ್ಚ  ನೀರಾವರಿ ಒಳ್ಳೆಯದಲ್ಲ.

ಡ್ರಿಪ್ ವ್ಯವಸ್ಥೆಯ ಜೀವಾಳ ಫಿಲ್ಟರ್

ಹನಿ ನೀರಾವರಿ ಫಲ ಕೊಡಬೇಕಾದರೆ ಏನು ಅಗತ್ಯ :

 • ಹನಿ ನೀರಾವರಿಗೆ ಮುಖ್ಯವಾಗಿ ಬೇಕಾಗುವುದು ಸೋಸು ವ್ಯವಸ್ಥೆ( filter)  ಯಾರು ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುತ್ತಾರೆಯೋ ಅವರೆಲ್ಲಾ  ತಮ್ಮ ನೀರಿನ ಮೂಲಕ್ಕೆ ಅನುಗುಣವಾಗಿ ಬೇರೆ ಬೇರೆ ತರಹದ ಫಿಲ್ಟರ್ ಗಳನ್ನು ಅಳವಡಿಸಿಕೊಳ್ಳಬೇಕು.
 • ಕೆರೆ ನೀರು , ಕೊಳವೆ ಬಾವಿಯ ನೀರು, ಹೊಳೆ,ಅಥವಾ ಕಟ್ಟದ ನೀರಿನಲ್ಲಿ ನೀರಿನ ಜೊತೆಗೆ ಯಾವ ಕಶ್ಮಲಗಳು ಬರುತ್ತವೆ,
 • ಅದನ್ನು ಸೋಸಲು ಯಾವ ಸೋಸು ವ್ಯವಸ್ಥೆ ಬೇಕೋ ಅದನ್ನು  ಅಳವಡಿಸಿದರೆ ಮಾತ್ರ ಹನಿ ನೀರಾವರಿ ಯಶಸ್ವಿ.
 • ಕೆರೆ , ಬಾವಿ ನೀರಿನಲ್ಲಿ ಹೆಚ್ಚಾಗಿ ಹಾವಸೆ ಇರುತ್ತದೆ. ಕೊನೇ ಹಂತದಲ್ಲಿ ಕೆಸರು ಸಹ ಇರುತ್ತದೆ.
 • ಇದನ್ನು ಸೋಸಲು ಸ್ಯಾಂಡ್ ಫಿಲ್ಟರ್ ಅಳವಡಿಸಲೇ ಬೇಕು.
 • ಕೊಳವೆ ಬಾವಿಯ ನೀರಿನಲ್ಲಿ ಗಂಧದ ತರಹ ಪೈಪುಗಳಗ ಗೋಡೆಗೆ ಅಂಟಿಕೊಳ್ಳುವ ಹಳದಿ ಬಣ್ಣದ ಕಶ್ಮಲ ಇದ್ದರೆ ಅದಕ್ಕೆ ಸ್ಯಾಂಡ್ ಫಿಲ್ಟರ್ ಅಳವಡಿಸಬೇಕು.
 • ಇಂತಹ ಕಶ್ಮಲಗಳು ನೀರಿನಲ್ಲಿ ತೇಲುವ ಕಾರಣ ಇದನ್ನು ಪರಿಪೂರ್ಣವಾಗಿ ಸೋಸಿ ಕಳುಹಿಸಲು ಆಗುವುದಿಲ್ಲ.
 • ಇಂತಹ ನೀರಿನ ಮೂಲ ಇದ್ದರೆ ಅವರು ಹನಿ ನೀರಾವರಿಗಾಗಿ ಡ್ರಿಪ್ಪರು, ಇನ್ ಲೈನ್ ಡ್ರಿಪ್ಪರು ಅಳವಡಿಸಿಕೊಳ್ಳುವುದು ಸೂಕ್ತವಲ್ಲ.
 • ಇದಕ್ಕೆ ವರ್ಷಕ್ಕೆ ಎರಡು ಮೂರು ಸಲ ಆಮ್ಲ ಉಪಚಾರ ಮಾಡಬೇಕಾಗುತ್ತದೆ.
 • ಈ ನೀರಿಗೆ ಸೂಕ್ಷ್ನ ಸಿಂಚನ, ಅತೀ ಸೂಕ್ಶ್ಮ ಸಿಂಚನ ಮಾಡುವ ಮಿಸ್ಟ್ ಗಳು ಅಥವಾ ಸ್ಪ್ರಿಂಕರ್ ಗಳೇ ಸೂಕ್ತ.
 • ಸ್ಕ್ರೀನ್ ಫಿಲ್ಟರ್ ಎಂಬುದು ಬರೇ ಮೈಕ್ರೋ ಟ್ಯೂಬ್, ಸೂಕ್ಷ್ಮ ಸಿಂಚನ ಹಾಗೂ ಸ್ಪ್ರೇ ಜೆಟ್ ಗಳಿಗೆ ಸೂಕ್ತ.
 • ನೀರಿನಿಂದ ಭಾರವಾದ ಕಲ್ಲು ಚೂರುಗಳು ಬರುವಂತಹ ನೀರಿನ ಮೂಲಕ್ಕೆ ಹೈಡ್ರೋ ಸೈಕ್ಲೋನ್ ಫಿಲ್ಟರ್ ಮತ್ತು ಸ್ಕ್ರೀನ್ ಫಿಲ್ಟರ್ ಅಳವಡಿಸಬೇಕು.
 • ಹಾವಸೆಗೆ ಹಾಗೂ ಗಂಧದ ತರಹದ ಹಗುರ ಕಶ್ಮಲಗಳಿಗೆ ಡಿಸ್ಕ್ ಫಿಲ್ಟರ್ ಆಳವಡಿಸಬಹುದು.
 • ಇದರಲ್ಲಿ ಸಹ 50% ಮಾತ್ರ ಫಲ.

ಡ್ರಿಪ್ ನೀರಾವರಿಯಲ್ಲಿ ನೆಲ ಒದ್ದೆಯಾಗುವಿಕೆ

ಯಾಕೆ  ಹನಿ ನೀರಾವರಿ ಫಲ ಕೊಡುವುದಿಲ್ಲ:

 • ಸಮರ್ಪಕವಾದ ಫಿಲ್ಟರ್ ಅಳವಡಿಸದವರಿಗೆ ಯಾವಾಗಲೂ ಹನಿ ನೀರಾವರಿ ಕಿರಿ ಕಿರಿ ಕೊಡುತ್ತಲೇ ಇರುತ್ತದೆ.
 • ನೀರಿನಲ್ಲಿ ಯಾವ ಕಶ್ಮಲಗಳಿವೆ ಎಂಬುದನ್ನು ಅಭ್ಯಸಿಸದೆ ಹನಿ ನೀರಾವರಿ ಮತ್ತು ಫಿಲ್ಟರ್ ಅಳವಡಿಸಿಕೊಂಡವರಿಗೆ ಹನಿ ನೀರಾವರಿ ತೃಪ್ತಿ ಕೊಡಲಾರದು.
 • ಸಬ್ಸಿಡಿ ಆಸೆಗಾಗಿ ಹನಿ ನೀರಾವರಿ ಅಳವಡಿಸಿಕೊಂಡರೆ ಅವರ ಬಜೆಟ್ ನಲ್ಲಿ ಮಾಡಲಾದ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದು.
 • ಹನಿ ನೀರಾವರಿ ಪೈಪು, ಡ್ರಿಪ್ಪರು ಹಾಗೂ ಫಿಲ್ಟರ್ ಗಳಲ್ಲಿ  ಸೂಕ್ಷ್ಮ ಡಿಸೈನ್ ಇರುತ್ತದೆ.
 • ಅದು ಯಾವುದು ಎಂಬುದನ್ನು ಹತ್ತಾರು ಜನರಲ್ಲಿ ಕೇಳಿ ಆ ಬ್ರಾಂಡ್ ಅನ್ನು ಅಳವಡಿಸಿಕೊಳ್ಳಬೇಕು.
 • ಉತ್ತಮ ಗುಣಮಟ್ಟದ ಪೈಪಿನ ಒಳ ಗೊಡೆಯ ರಚನೆ ಕಶ್ಮಲಗಳನ್ನು ಅಲ್ಲಿ ನಿಲ್ಲದಂತೆ ಮುಂದೂಡಿ ಡ್ರಿಪ್ಪರನ್ನು ರಕ್ಷಿಸುತ್ತದೆ.
 • ಕೆಲವು ತಯಾರಿಕೆಯ ಡ್ರಿಪ್ಪರ್ ಗಳು ಕಶ್ಮಲಗಳನ್ನು ಹೊರ ಹಾಕುವ ಅಥವಾ ಒಳಗೆ ಸೇರಿಸಿಕೊಳ್ಳದ ಡಿಸೈನ್ ನಲ್ಲೇ ತಯಾರಿಸಲ್ಪಟ್ಟಿರುತ್ತವೆ.
 • ಅವು ಎಷ್ಟೇ ವರ್ಷ ಆದರೂ ಏಕ ಪ್ರಕಾರವಾಗಿ ನೀರನ್ನು ಹೊರ ಚೆಲ್ಲುತ್ತವೆ.
 • ಕೆಲವು ಅಳವಡಿಸಿದ ಕೆಲವೇ ಸಮಯದಲ್ಲಿ  ಬ್ಲಾಕ್ ಆಗಲು ಪ್ರಾರಂಭವಾಗುತ್ತದೆ.
 • ಪಂಪಿನ ನೀರು ಹೊರ ಚೆಲ್ಲುವ ಪ್ರಮಾಣಕ್ಕನುಗುಣವಾಗಿ ಲೆಕ್ಕಾಚಾರ ಹಾಕಿ ನೀರು ಹೊರ ಚೆಲ್ಲುವ ಸಾಧನಗಳನ್ನು ಅಳವಡಿಸದೆ ಇದ್ದರೆ ಹನಿ ನೀರಾವರಿ ಸೂಕ್ತ ಫಲಿತಾಂಶ ಕೊಡುವುದಿಲ್ಲ.
 • ಹನಿ ನೀರಾವರಿ ಮಾಡಿಕೊಳ್ಳುವವರು ಹೆಚ್ಚು ಹೆಡ್ ಉಳ್ಳ ಪಂಪನ್ನು ಆಯ್ಕೆ ಮಾಡಬೇಕಾಗುತ್ತದೆ.
 • ಇದು ಹೆಚ್ಚು ಒತ್ತಡವನ್ನು ಕೊಡುತ್ತದೆ.ಪಂಪಿನ ನೀರು ದೂಡುವ ಹೆಡ್ ಹೆಚ್ಚು ಇದ್ದರೆ ಕಶ್ಮಲಗಳು ಎಂಡ್ ಕ್ಯಾಪ್ ನ ಭಾಗದಲ್ಲಿ ಶೇಖರವಾಗುತ್ತದೆ.
 • ನಿಮ್ಮ ಹೊಲದ ಮಣ್ಣಿಗೆ ಹೊಂದಿಕೆಯಾಗುವಂತೆ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಬೇಕು.
 • ಕೆಲವು ಎರೆ ಮಣ್ಣು ಇರುವಲ್ಲಿ ಹನಿ ನೀರಾವರಿ ಉತ್ತಮ ಫಲಿತಾಂಶವನ್ನು ಕೊಡುತ್ತದೆ.
 • ಹನಿ  ನೀರಾವರಿಯಲ್ಲಿ ಬೀಳುವ ತೊಟ್ಟು ತೊಟ್ಟು ನೀರು ಹೆಚ್ಚು ವಿಶಾಲ ಜಾಗಕ್ಕೆ ಪಸರಿಸುವಂತಿರಬೇಕು.
 • ಅಂತಹ ಮಣ್ಣಿನಲ್ಲಿ ನೀರು ತಳಕ್ಕೆ ಇಳಿಯುವುದಿಲ್ಲ.
 • ಮರಳು ಮಣ್ಣು ಇರುವ ಹೊಲಕ್ಕೆ ಹನಿ ನೀರಾವರಿಯನ್ನು ಅಳವಡಿಸುವಾಗ ತುಂಬಾ ಜಾಗರೂಕತೆ ವಹಿಸಬೇಕು.
 • ಮರಳು ಮಣ್ಣಿನಲ್ಲಿ ನೀರು ವಿಶಾಲ ಜಾಗಕ್ಕೆ ಪಸರಿಸದೆ  ಹೆಚ್ಚಾದುದು ಬೇರು ವಲಯಕ್ಕಿಂತ ಕೆಳಕ್ಕಿಳಿಯುತ್ತದೆ.
 • ಇದರ ಫಲವಾಗಿ ನೀರಿನ ಜೊತೆಗೆ ಪೋಷಕಗಳೂ ಸಸ್ಯಕ್ಕೆ ದೊರೆಯದೆ ನಷ್ಟವಾಗುತ್ತದೆ.
 • ಇಂತಹ ಮಣ್ಣಿಗೆ ಹೆಚ್ಚು ನೀರು ತೊಟ್ಟಿಕ್ಕುವ ಸಾಧನಗಳನ್ನು ಸಸ್ಯದ ನಾಲ್ಕೂ ದಿಕ್ಕಿಗೆ ನೀರು ಬೀಳುವಂತೆ ಅಳವಡಿಸಿ ಕಡಿಮೆ ನೀರನ್ನು ಉಣಿಸಬೇಕು.

ಹನಿ ನೀರಾವರಿ ಮಾಡಿದರೆ ಅದು ಶಾಶ್ವತ ವ್ಯವಸ್ಥೆ ಆಗಿರುವಂತೆ ಮಾಡಬೇಕು. ಅದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲಿತಿರಬೇಕು. ಹನಿ ನೀರಾವರಿಯ ಎಲ್ಲಾ ಅನುಕೂಲತೆಗಳನ್ನೂ ನಗದೀಕರಣ ಮಾಡಲು ಸಾಧ್ಯವಿದ್ದರೆ  ಮಾತ್ರ ಇದು ಉತ್ತಮ ವ್ಯವಸ್ಥೆ. ಇಲ್ಲವಾದ್ಅರೆ ನಿತ್ಯ ಕಿರಿ ಕಿರಿ ಕೊಡುತ್ತದೆ.

Leave a Reply

Your email address will not be published. Required fields are marked *

error: Content is protected !!