ತುಳಿಸಿ ಗಿಡಕ್ಕೆ ಸುತ್ತು ಬರಬೇಕು ಎನ್ನುತ್ತಾರೆ ಹಿರಿಯರು. ಬೆಳೆಗಳ ಬುಡಕ್ಕೆ ದಿನಾ ಹೋಗಬೇಕು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ಇದಕ್ಕೆ ಕಾರಣ ಇಲ್ಲಿದೆ.
ತುಳಸಿ ಗಿಡದ ಸುತ್ತ ಒಂದು ಸುತ್ತು ಬಂದಾಗ ಎಲೆಗಳೆಲ್ಲಾ ಕಳೆಗುಂದಿರುವುದು ಕಂಡರೆ , ಎರಡನೇ ಸುತ್ತಿಗೆ ಎಲೆಯಲ್ಲಿ ಏನೋ ಇರುವುದೂ, ಮೂರನೇ ಸುತ್ತಿಗೆ ಮತ್ತೂ ಸ್ಪಷ್ಟತೆ, ಹೀಗೇ ಹತ್ತು ಸುತ್ತು ಬರುವಾಗ ಅಲ್ಲಿ ಏನಾಗಿದೆ ಎಂಬುದರ ಪೂರ್ಣ ಚಿತ್ರಣ ನಮಗೆ ತಿಳಿಯುತ್ತದೆ.
- ತುಳಸಿ ಗಿಡಕ್ಕೆ ಸುತ್ತು ಬಂದಾಗ ಅದಕ್ಕೆ ಏನಾಗಿದೆ ಎಂಬುದನ್ನು ನೀವೇ ತಿಳಿದುಕೊಳ್ಳಬಹುದು.
ತುಳಸಿ ಗಿಡಕ್ಕೆ ಯಾಕೆ ಪ್ರದಕ್ಷಿಣೆ ಬರಬೇಕು?
- ನಮ್ಮ ಮನೆ ಮತ್ತು ಕುಟುಂಬದ ಸುರಕ್ಷೆಯ ಬಗ್ಗೆ ರಕ್ಷಣೆ ನೀಡುವ ತುಳಸಿ ಗಿಡದ ಯೋಗ ಕ್ಷೇಮವನ್ನು ಗಮನಿಸಲು ನಾವು ನಿತ್ಯ ತುಳಸಿ ಗಿಡಕ್ಕೆ ಸುತ್ತು ಬರಬೇಕು.
- ಮಳೆಗಾಲ ಕಳೆದು ಕಾರ್ತಿಕ ಮಾಸ ಬಂದರೆ ಹಬ್ಬದ ಮಾಸ. ಈ ಸಮಯದಲ್ಲಿ ತುಳಸಿ ಅರ್ಚನೆ ಒಂದು ಅಂಗ.
- ಕಾರ್ತಿಕ ಮಾಸದಾದ್ಯಂತ ತುಳಸಿ ಗಿಡದ ಸುತ್ತ ಸ್ವಚ್ಚ ಮಾಡಿ ದಿನಾ ಸುತ್ತು ಬಂದು ಪೂಜೆ ಮಾಡಬೇಕು.
- ವರ್ಷದ ಎಲ್ಲಾ ದಿನ ಮೊದಲು ತುಳಸಿ ಕಟ್ಟೆಗೆ ಸುತ್ತು ಬಂದು ಒಂದು ತಂಬಿಗೆ ನೀರು ಹಾಕಿ ತುಳಸಿಗೆ ನಮಸ್ಕರಿಸಬೇಕು.
- ಇದೆಲ್ಲಾ ಬರೇ ಧಾರ್ಮಿಕ ನಂಬಿಕೆ ಅಲ್ಲ. ಇದರಲ್ಲಿ ಸಸ್ಯದ ರಕ್ಷಣೆ ಅಂಶ ಸೇರಿದೆ.
ತುಳಸಿ ಗಿಡಕ್ಕೆ ಸುತ್ತು ಬರುವಾಗ ತ್ರಿಕರಣ ಪೂರ್ವಕವಾಗಿ ಗಿಡವನ್ನು ಗಮನಿಸುತ್ತಾ ಸುತ್ತು ಬರಬೇಕು. ಆಗ ತುಳಸಿ ಗಿಡದ ಸ್ಥಿತಿ ಹೇಗಿದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ.
- ತುಳಸಿ ಗಿಡಕ್ಕೆ ಏನಾಗುತ್ತದೆ- ಏನೂ ಆಗುವುದಿಲ್ಲ ಎಂದೆಣಿಸದಿರಿ.
- ಮಳೆಗಾಲ ಕಳೆದ ತರುವಾಯ ಮತ್ತೆ ಬೇಸಿಗೆ ಕಾಲ ಬರುವ ತನಕ ತುಳಸಿ ಗಿಡಕ್ಕೆ ತುಂಬಾ ತೊಂದರೆಯ ಕಾಲ.
- ತುಳಸಿ ಗಿಡದಲ್ಲಿ ಎಲೆಗಳೇ ಇಲ್ಲದಾಗುತ್ತದೆ. ಇದ್ದಎಲೆಗಳೂ ಹಳದಿಯಾಗುತ್ತದೆ.
- ಕೆಲವೊಮ್ಮೆ ತುಳಸಿ ಗಿಡವೇ ಸಾಯುತ್ತದೆ. ಇದರಿಂದ ರಕ್ಷಣೆ ಕೊಡಲು ನಾವು ದಿನಾ ತುಳಸಿ ಗಿಡಕ್ಕೆ ಸುತ್ತು ಬಂದು ಎಲೆ ಒದ್ದೆಯಾಗುವಂತೆ ನೀರು ಹಾಕಬೇಕು.
ಯಾಕೆ ತೊಂದರೆ ಆಗುತ್ತದೆ?
- ತುಳಸಿ ಗಿಡಕ್ಕೆ ಮಳೆಗಾಲ ಕಳೆದು ಸ್ವಲ್ಪ ಬಿಸಿ ವಾತಾವರಣ ಹೆಚ್ಚಾದಂತೆ ಕೆಲವು ಜಾತಿಯ ಮೈಟ್ ಗಳು, ಹಿಟ್ಟು ತಿಗಣೆ, ಕಡ್ಡಿ ಕೀಟಗಳು, ಕೆಲವು ಹುಳಗಳು ಅದಕ್ಕೆ ತೊಂದರೆ ಕೊಡಲು ಪ್ರಾರಂಬಿಸುತ್ತವೆ.
- ಇದರಿಂದ ಇಡೀ ಸಸ್ಯವೇ ಸೊರಗುತ್ತದೆ.
- ಈ ಮೈಟ್ ಜಾತಿಯ ಕೀಟಗಳು ಗಿಡದ ರಸ ಹೀರಿ ಅದನ್ನು ಸೊರಗುವಂತೆ ಮಾಡುತ್ತದೆ.
- ಇದನ್ನು ತಿನ್ನಲು ಕೆಂಪು ಇರುವೆಗಳು ಬರುತ್ತವೆ. ಈ ಇರುವೆಗಳು ತಮ್ಮ ಕಾಲಿನ ಮೂಲಕ ಕೀಟವನ್ನು ಬೇರೆ ಬೇರೆ ಕಡೆಗೂ ಪಸರಿಸುತ್ತವೆ.
- ರಸ ಹೀರುವ ಕೀಟಗಳು ಮಳೆಗಾಲ ಮುಗಿಯುವ ತನಕವೂ ಇರುತ್ತವೆ.
ಪರಭಕ್ಷಕಗಳು ತುಳಸಿ ಗಿಡದ ರಕ್ಷಕಗಳು:
- ಕೀಟಗಳನ್ನು ತಿನ್ನಲು ಪ್ರಾರ್ಥನಾ ಕೀಟ ( ಪ್ರೇಯಿಂಗ್ ಮ್ಯಾಂಟಿಸ್) ಸಸ್ಯದ ಎಲೆಯಲ್ಲಿ ಹೊಂಚು ಹಾಕುತ್ತಿರುತ್ತದೆ.
- ಒಂದು ಜಾತಿಯ ಜೇಡ ಇವುಗಳನ್ನು ಭಕ್ಷಿಸಲು ಗಿಡದಲ್ಲಿ ಬಲೆ ಹೆಣೆದು ಕಾಯುತ್ತಿರುತ್ತದೆ.
- ಕೆಲವೊಮ್ಮೆ ಗುಲಗುಂಜಿ ಕೀಟ, ಒಂದು ಜಾತಿಯ ನೊಣ, ಅಲ್ಲಿಗೆ ಅದನ್ನು ತಿನ್ನಲು ಬರುತ್ತದೆ.
- ಈ ಎರಡು ಕೀಟಗಳ ಪ್ರಾಬಲ್ಯ ಜಾಸ್ತಿಯಾದರೆ ತುಳಸಿ ಎಲೆಗಳಲ್ಲಿ ವಾಸ್ತವ್ಯ ಹೂಡಿದ ರಸ ಹೀರುವ ಕೀಟ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
- ಪರಭಕ್ಷಕಗಳು ಬೆರಳೆಣಿಕೆಯಲ್ಲಿರುತ್ತವೆ. ಹಾನಿ ಮಾಡುವ ಕೀಟಗಳು ನೂರಾರು ಇರುತ್ತವೆ.
- ದಿನದಿಂದ ದಿನಕ್ಕೆ ಅವು ಸಂಖ್ಯಾಭಿವೃದ್ಧಿಯಾಗುತ್ತಾ ಇರುತ್ತವೆ.
- ಒಣಗಿದ ಭಾಗಗಳನ್ನು ತೆಗೆದು ದೂರ ಹಾಕುವುದು ಉತ್ತಮ.
- ಯಾವುದೇ ಕೀಟನಾಶಕ ಬಳಸುವುದು ಬೇಕಾಗಿಲ್ಲ. ದಿನಾ ಎಲೆ ಒದ್ದೆಯಾಗುವಂತೆ ನೀರು ಹಾಕುವುದರಿಂದ ಈ ಕೀಟ ದೂರವಾಗುತ್ತದೆ.
ತುಳಸಿ ಗಿಡಕ್ಕೆ ದಶ ಪ್ರದಕ್ಷಿಣೆ ಎಂಬ ಪದದ ಬಳಕೆ ಯಾಕೆಂದರೆ ಒಂದು ಗಿಡದ ಸುತ್ತ ಹೆಚ್ಚು ಹೆಚ್ಚು ಸುತ್ತು ಬಂದಷ್ಟು ಅದರ ಕಷ್ಟಗಳು ನಮ್ಮ ಗಮನಕ್ಕೆ ಬರುತ್ತವೆ.
ಸುತ್ತು ಬಾರದೇ ಇದ್ದರೆ ಇದು ಯಾವುದೂ ಗೊತ್ತಾಗುವುದಿಲ್ಲ. ಇದನ್ನು ಪ್ರತಿಯೊಬ್ಬ ರೈತನೂ ತನ್ನ ಹೊಲದ ಬೆಳೆಗಳ ಮೇಲ್ವಿಚಾರಣೆಯಲ್ಲಿ ಅನುಸರಿಸಿದರೆ ಅದೆಷ್ಟೋ ವಿಚಾರಗಳು ನಮಗೆ ತಿಳಿಯಲು ಸಾಧ್ಯ. ಸಮಸ್ಯೆಗಳನ್ನು ಪ್ರಾರಂಭದಲ್ಲೇ ನಿವಾರಣೆ ಮಾಡಲೂ ಸಾಧ್ಯ.
ಈ ಜೇಡ ಒಂದು ಪರಭಕ್ಷಕ. ಇದರಿಂದ ಹಾನಿ ಇಲ್ಲ.