ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಈ ಬಸವನ ಹುಳ ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರು ಇದರಿಂದ ಬೇಸತ್ತಿದ್ದಾರೆ. ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗುವುದಿಲ್ಲ.
- ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತಿವೆ.
- ಹಗಲು ನಾಲ್ಕು– ಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ ಏರಿ ಬಿಡುತ್ತವೆ.
- ಇವು ದೊಡ್ಡ ಗಾತ್ರದ ಬಸವನ ಹುಳುಗಳು. ಇವು ಅಡಿಕೆ ಮರದ ಎಳೆ ಎಲೆಗಳನ್ನು ಮತ್ತು ಪಕ್ಕದಲ್ಲಿರುವ ಇತರ ಗಿಡಗಳ ಎಳೆ ಎಲೆಗಳನ್ನು ತಿನ್ನುತ್ತವೆ.
- ಅಡಿಕೆ ಮರಕ್ಕೆ ಭಾರೀ ಸುಳಿ ಕೊಳೆ ರೋಗಕ್ಕೂ ಇದು ಕಾರಣವಾಗುತ್ತಿದೆ.
ಜನ ಇವುಗಳನ್ನು ಕಂಡಾಗಲೆಲ್ಲಾ ಹಿಡಿದು ಗೋಣಿ ಚೀಲದಲ್ಲಿ ತುಂಬಿ ದೂರದ ಒಯ್ದು ಬಿಸಾಡುತ್ತಾರೆ.
ಬಸವನ ಹುಳು ಏನು:
- ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಪ್ರಕೃತಿಯಲ್ಲಿ ಹುಟ್ಟಿಕೊಳ್ಳುವ ಮೃದು ಶರೀರದ ಜೀವಿಗಳೇ ಬಸವನ ಹುಳು ,
- ಕಪ್ಪೆ ಚಿಪ್ಪಿನ ಜೀವಿಗಳು, ಮುತ್ತಿನ ಚಿಪ್ಪಿನ ಜೀವಿಗಳು, ಶಂಖದ ಹುಳುಗಳು, ಕವಡೆ ಹುಳು ಮುಂತಾದ ಹೆಸರುಂಟು.
- ಇದು ಮೃದ್ವಂಗಿ ಪ್ರಭೇದಕ್ಕೆ ಸೇರಿವೆ.
- ಇವುಗಳು ಕೆಲವು ಮಣ್ಣಿನಲ್ಲಿ, ಕೆಲವು ನೀರಿನಲ್ಲಿಯೂ ಮತ್ತೆ ಕೆಲವು ಉಪ್ಪು ನೀರಿನಲ್ಲಿ ವಾಸಿಸುತ್ತವೆ.
- ಚಿಪ್ಪು ಸಹಿತವಾಗಿ ಇರುವ ಜೀವಿ ಬಸವನ ಹುಳು
ಚಿಪ್ಪು ರಹಿತವಾಗಿ ಇರುವಂತಹ ಹುಳುವಿಗೆ ಸಿಂಬಳದ ಹುಳ (Slug ) gray garden slug ಎಂದು ಹೆಸರು.
- ಮಳೆಗಾಲದಲ್ಲಿ, ಮಂಜು ಬೀಳುವ ಚಳಿಗಾಲದಲ್ಲಿ ಇವುಗಳ ಸಂತಾನಾಭಿವೃದ್ಧಿ ಜಾಸ್ತಿ.
- ಮಳೆಗಾಲ ಪ್ರಾರಂಭವಾಗುವಾಗಲೂ ಸಂಖ್ಯೆ ಹೆಚ್ಚಿಗೆಯಾಗುತ್ತವೆ. ನಿರುಪದ್ರವಿಯಂತೆ ಕಂಡರೂ ಇವುಗಳಿಂದ ತೊಂದರೆ ಇದೆ.
- ಇವು ಸಸ್ಯದ ಎಳೆ ಚಿಗುರು, ಹೂವು ಕಾಯಿಗಳನ್ನು ಚೀಪಿ ರಸ ಹೀರುತ್ತವೆ ಮತ್ತು ಭಕ್ಷಿಸುತ್ತವೆ.
- ಪ್ರಾದೇಶಿಕವಾಗಿ ಬೇರೆ ಬೇರೆ ಜಾತಿಯ ಮೃದ್ವಂಗಿ ಹುಳುಗಳನ್ನು ಕಾಣಬಹುದು.
- ಇವು ಕೇವಲ ಭಕ್ಷಕಗಳು ಮಾತ್ರವಲ್ಲ, ರೋಗ ವಾಹಕಗಳೂ ಆಗಿವೆ.
ಹಾನಿ :
- ಬಸವನ ಹುಳು ಮತ್ತು ಸಿಂಬಳದ ಹುಳುಗಳು ಬೆಳೆಗಳ ಎಳೆ ಎಲೆಗಳನ್ನು ಭಕ್ಷಿಸುತ್ತವೆ.
- ಎಳೆ ಸಸಿಗಳ ಮೃದು ಕಾಂಡವನ್ನೂ ತಿನ್ನುತ್ತದೆ.
- ಹೂವುಗಳನ್ನು ತಿಂದು ಹಾನಿ ಮಾಡಿ ಫಸಲಿಗೆ ತೊಂದರೆ ಮಾಡುತ್ತದೆ.
- ಹಣ್ಣು ಹಂಪಲಿನ ಸಿಪ್ಪೆಯ ಮೇಲೆ ಕುಳಿತು ಅಲ್ಲಿನ ಭಾಗವನ್ನು ತಿನ್ನುತ್ತವೆ.
- ನೆಲಕ್ಕೆ ಹತ್ತಿರವಾಗಿ ಬೆಳೆಯುವ ಹಣ್ಣೂ ಹಂಪಲು ಗಿಡಗಳಿಗೆ ಇದರ ಹಾವಳಿ ಜಾಸ್ತಿ.
- ಸ್ಟ್ರಾಬೆರ್ರಿ, ಟೊಮಾಟೋ, ಅನನಾಸು, ಬೆಂಡೆ, ಹತ್ತಿ , ಮುಂತಾದ ಹಲವಾರು ಬೆಳೆಗಳಿಗೆ ಭಾರೀ ಹಾನಿಮಾಡುತ್ತವೆ.
- ಎಳೆ ಪ್ರಾಯದ ಅಡಿಕೆ ಮರದ ಮೇಲೆ ಏರಿ ಅಲ್ಲಿ ಏಳೆ ಸಿಂಗಾರವನ್ನು ತಿನ್ನುವ ಮೂಲಕ ಫಸಲು ಕಡಿಮೆಯಾಗುವಂತೆ ಮಾಡುತ್ತವೆ.
- ಲಿಂಬೆ ಕಾಯಿ, ಪಪ್ಪಾಯಿ ಗಿಡ ಕಾಯಿಗಳ ರಸ ಹೀರಿ ತೊಂದರೆ ಮಾಡುತ್ತವೆ.
- ಆರೋಗ್ಯವಂತ ಗಿಡ, ರೋಗ ಪೀಡಿತ ಗಿಡಗಳ ರಸ ಹೀರಿ ಪರಸ್ಪರ ರೋಗ ವರ್ಗಾವಣೆ ಮಾಡುತ್ತದೆ.
- ಹೆಚ್ಚಾಗಿ ನಂಜಾಣು ರೋಗ(ವೈರಸ್) ಹೀಗೆ ಪ್ರಸಾರವಾಗುತ್ತದೆ.
ಹತೋಟಿ:
- ಬಸವನ ಹುಳು ಮತ್ತು ಸಿಂಬಳದ ಹುಳುಗಳು ನೆರಳಿರುವ, ಕೊಳೆಯುವ ವಸ್ತುಗಳಿರುವಲ್ಲಿ ಹೆಚ್ಚು.
- ಮಳೆಗಾಲದಲ್ಲಿ ಹಾವಸೆಗಳೇ ಇದರ ಆಹಾರ.
- ಬಾಳೆ ಬೆಳೆಯುವಲ್ಲಿ ಅಧಿಕವಾಗಿರುತ್ತವೆ.
- ಗೋಡೆಯ ಸೆರೆಗಳಲ್ಲಿ ಕಲೆ ಹೆಚ್ಚು ಇರುವಲ್ಲಿಯೂ ಇರುತ್ತವೆ.
- ಸಾಧ್ಯವಾದಷ್ಟು ಹೆಕ್ಕಿ ಅದನ್ನು ಶೇ. 10 ಸಾಂದ್ರತೆಯ ಉಪ್ಪು ನೀರಿನಲ್ಲಿ ಹಾಕಿ ನಾಶಮಾಡಬೇಕು.
- ಮೊದಲು ದಿನಾಲೂ ಹೆಕ್ಕಿ ನಾಶಮಾಡಬೇಕು.
- ಸಂಖ್ಯೆ ಕಡಿಮೆಯಾದ ನಂತರ ವಾರಕ್ಕೊಮ್ಮೆ ಹೆಕ್ಕಿದರೂ ಸಾಕು.
- ಮದ್ಯಾಹ್ನದ ಮೇಲೆ ಅಥವಾ ಸಂಜೆ ಹೊತ್ತು ಟಾರ್ಚ್ ಲೈಟ್ ಹಾಕಿ ಹೆಕ್ಕಿದರೆ ಹೆಚ್ಚು ಸಂಖ್ಯೆಯ ಹುಳು ಸಿಗುತ್ತದೆ ಮತ್ತು ಇದರಿಂದ ನಿರ್ಮೂಲನೆ ಪರಿಣಾಮಕಾರಿಯಾಗುತ್ತದೆ.
- ಹಗಲು ಹೊತ್ತು ಅವು ಎಲ್ಲಿ ಅಡಗಿರುತ್ತವೆ ಎಂಬುದನ್ನು ಪತ್ತೆ ಹಚ್ಚಬೇಕು.
- ಸಾಧ್ಯವಾದಷ್ಟು ಅಲ್ಲಲ್ಲಿ ಗೋಣಿ ಚೀಲ ಮರದ ಹಲಗೆಯನ್ನು ಹಾಕಿ ಇಟ್ಟರೆ ಅದರ ಅಡಿ ಭಾಗದಲ್ಲಿ ಅವು ಸೇರಿಕೊಳ್ಳುತ್ತವೆ.
- ಉಪ್ಪು , ತಾಮ್ರ ಮತ್ತು ಸುಣ್ಣ ಇದಕ್ಕೆ ದೂರ. ಬಸವನ ಹುಳು ಮತ್ತು ಸಿಂಬಳದ ಹುಳುಗಳ ಮೇಲೆ ಉಪ್ಪಿನ ದ್ರಾವಣ, ತಾಮ್ರದ ಸಲ್ಫೇಟ್ನ ದ್ರಾವಣ , ಸಾಬೂನಿನ ನೀರು ಅಥವಾ ಸುಣ್ಣ ಬಿದ್ದರೆ ಅದು ಉಸಿರಾಟ ಸಮಸ್ಯೆಗೊಳಪಟ್ಟು ಸಾಯಬಹುದು.
- ಸತ್ತ ಹುಳುಗಳನ್ನು ವಿಷಕಾರಿಯಲ್ಲದ ಕಾರಣ ಕಂಪೋಸ್ಟು ಗುಂಡಿಗೆ ಹಾಕಬಹುದು. ಇದರಲ್ಲಿ ಸಾರಜನಕದ ಅಂಶ ಇರುತ್ತದೆ.
ಈ ಜೀವಿಗಳ ಅಭಿವೃದ್ದಿಗೆ ಅವಕಾಶವಾಗುವ ಸನ್ನಿವೇಶಗಳನ್ನು ಕಡಿಮೆ ಮಾಡಿ ಇದನ್ನು ಹತೋಟಿ ಮಾಡಬಹುದು.
ಟ್ರಾಪ್ ಗಳು:
- ಹುಳುಗಳನ್ನು ಆಕರ್ಷಣೆ ಮಾಡಲು ನಾವೇ ಟ್ರಾಪ್ಗಳನ್ನು ಮಾಡಿಕೊಳ್ಳಬಹುದು.
- ಇದರಿಂದ ಹುಳುಗಳನ್ನು ನಾಶಮಾಡಲು ಅನುಕೂಲ.
- ಮರದ ಹಲಗೆಗಳನ್ನು ಓರೆಯಾಗಿ ಗೋಡೆಗೆ ತಾಗಿಸಿ ಇಡುವುದು, ಹೂ ಕುಂಡಗಳನ್ನು ಒಂದು ಬದಿ ಸ್ವಲ್ಪ ಎತ್ತಿ ಅಲ್ಲಲ್ಲಿ ಕವುಚಿ ಹಾಕಿದರೆ ಅಲ್ಲಿಗೆ ಹಗಲು ಹೊತ್ತು ಅವು ಅಡಗಿಕೊಳ್ಳಲು ಬರುತ್ತವೆ.
- ನಂತರ ಅವುಗಳನ್ನು ಹಿಡಿದು ನಾಶ ಮಾಡುವುದು ಸುಲಭ. ಪ್ಲಾಸ್ಟಿಕ್ ತೊಟ್ಟೆಯೊಳಗೆ ತುಂಬಿ ಗಾಳಿಯಾಡದಂತೆ ಮೂರು ನಾಲ್ಕು ದಿನ ಮುಚ್ಚಿಟ್ಟರೆ ಅವು ಸಾಯುತ್ತದೆ.
- ಅನಂತರ ಅದನ್ನು ಕಂಪೋಸ್ಟು ಹಾಕಬಹುದು. ಸಕ್ಕರೆ ನೀರು ಮತ್ತು ಈಸ್ಟ್ ಮಿಶ್ರಣ ಮಾಡಿದ ಕಳಿತ ದ್ರಾವಣಕ್ಕೂ ಈ ಹುಳುಗಳು ಆಕರ್ಷಿತವಾಗುತ್ತವೆ.
- ಬೀಯರ್ಗೂ ಇದು ಆಕರ್ಷಿತವಾಗುತ್ತದೆ. ಬಸವನ ಹುಳು ಮತ್ತು ಸಿಂಬಳದ ಹುಳು ಆಕರ್ಷಿಸುವ ಟ್ರಾಪ್ ಗಳು ಲಭ್ಯವಿದೆ.
- ನೆಲಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿದರೆ ಅದರೊಳಗೆ ಬಿಸಿ ಏರ್ಪಟ್ಟು ಹುಳುವಿನ ಮೊಟ್ಟೆಗಳು ನಾಶವಾಗುತ್ತವೆ.
ಮರಮಟ್ಟಿನ ಬೆಳೆಗಳಿಗೆ ಇವುಗಳಿಂದಾಗುವ ಹಾನಿಯನ್ನು ಕಡಿಮೆ ಮಾಡಲು ಸುಣ್ಣ ಮತ್ತು ಡೆಲ್ಟಾಮೆಥ್ರಿನ್ (Deltamethrin) ಪುಡಿಯನ್ನು 10 : 2 ಪ್ರಮಾಣದಲ್ಲಿ ಮಿಶ್ರಣ ಮಾಡಿ ಮರದ ಕಾಂಡಕ್ಕೆ ಪೈಂಟ್ನಂತೆ ಲೇಪನ ಮಾಡಿದಂತೆ ಲೇಪಿಸಿದರೆ ಹುಳುಗಳು ಹರಿದು ಹೋಗಲು ಅನನುಕೂಲವಾಗುತ್ತದೆ. ಮರಗಳಲ್ಲಿ ನೆಲಕ್ಕೆ ಬಾಗಿದ ಗೆಲ್ಲುಗಳನ್ನು ತೆಗೆಯಬೇಕು.
- ರಾಸಾಯನಿಕವಾಗಿ ಹತೋಟಿ ಮಾಡಲು ಮೆಟಾಲ್ಡಿಹೈಡ್, ಐರನ್ಫೋಸ್ಫೇಟ್ಗಳನ್ನು ಬಳಸಬಹುದು.
- ಇದರಲ್ಲಿ ಹುಳುಗಳು ಸಾಯುತ್ತವೆ. ಆದರೆ ಇದನ್ನು ತಿಂದ ಬೆಕ್ಕು ನಾಯಿಗಳೂ ಸಾಯಬಹುದು.
- ಕೈಗೆ ಗ್ಲೌಸ್ ಹಾಕಿ ಹಿಡಿದು ಕೊಲ್ಲುವುದು ಉತ್ತಮ.
ಅನವಶ್ಯಕವಾಗಿ ಇವುಗಳನ್ನು ಕೊಲ್ಲಬೇಕಾಗಿಲ್ಲ. ಬೆಳೆಗಳಿಗೆ ಹಾನಿ ಮಾಡುತ್ತಿದ್ದು ತುಂಬಾ ನಷ್ಟವಾಗುತ್ತದೆ ಎಂದಾದರೆ ಮಾತ್ರ ಇದರ ನಾಶಕ್ಕೆ ಕ್ರಮ ಕೈಗೊಳ್ಳಬೇಕು.